ನವದೆಹಲಿ: ಅದಾನಿ ಸಮೂಹದ ಕಂಪನಿಯಲ್ಲಿ ಹೊಸ ಹೂಡಿಕೆಯನ್ನು ತಡೆಹಿಡಿದಿರುವುದಾಗಿ ಫ್ರಾನ್ಸ್‌ನ ಇಂಧನ ಕ್ಷೇತ್ರದ ದೈತ್ಯ 'ಟೋಟಲ್ ಎನರ್ಜೀಸ್ ಎಸ್‌ಇ' ಸೋಮವಾರ ತಿಳಿಸಿದೆ.
ಟೋಟಲ್ ಎನರ್ಜೀಸ್ ಕಂಪನಿಯು ಅದಾನಿ ಸಮೂಹದ ಅತಿದೊಡ್ಡ ವಿದೇಶಿ ಹೂಡಿಕೆದಾರರಲ್ಲಿ ಒಂದಾಗಿದೆ.
ಕಂಪನಿಯು ಅದಾನಿ ಗ್ರೀನ್ ಎನರ್ಜೀಸ್ ಲಿಮಿಟೆಡ್ (ಎಜಿಇಎಲ್) ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್‌ನಲ್ಲಿ (ಎಟಿಜಿಎಲ್) ಈ ಹಿಂದೆ ಭಾರಿ ಮೊತ್ತದ ಹೂಡಿಕೆ ಮಾಡಿದೆ.
ತನ್ನ ಪಾಲುದಾರ ಅದಾನಿ ಸಮೂಹದ ಸಂಸ್ಥಾಪಕ ಅಧ್ಯಕ್ಷರು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ತನಿಖೆ ಎದುರಿಸುತ್ತಿರುವ ಬಗ್ಗೆ ತಿಳಿದಿಲ್ಲ ಎಂದು ಟೋಟಲ್ ಎನರ್ಜೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
'ದೋಷಾರೋಪಣೆಯು ಎಜಿಇಎಲ್‌ಅನ್ನು ಅಥವಾ ಎಜಿಇಎಲ್ ಜತೆ ಪಾಲುದಾರಿಕೆ ಹೊಂದಿರುವ ಕಂಪನಿಗಳನ್ನು ಗುರಿಯಾಗಿಸಿಕೊಂಡಿಲ್ಲ. ಆದರೂ, ಅದಾನಿ ಸಮೂಹದ ವ್ಯಕ್ತಿಗಳ ವಿರುದ್ಧ ಕೇಳಿಬಂದಿರುವ ಆರೋಪಗಳು ಮತ್ತು ಅದರ ಪರಿಣಾಮಗಳು ಏನು ಎಂಬುದು ಸ್ಪಷ್ಟವಾಗುವವರೆಗೂ ಅದಾನಿ ಸಮೂಹದಲ್ಲಿ ಯಾವುದೇ ಹೊಸ ಹೂಡಿಕೆ ಮಾಡುವುದಿಲ್ಲ' ಎಂದು ಹೇಳಿದೆ.