ತಿರುವನಂತಪುರ: ಕೇರಳದ ಐಎಎಸ್ ಅಧಿಕಾರಿಯೊಬ್ಬರ ಮೊಬೈಲ್ ಫೋನ್ ಹ್ಯಾಕ್ ಮಾಡಿ, ಧರ್ಮಗಳ ಹೆಸರಿನಲ್ಲಿ ವಾಟ್ಸ್‌ಆಯಪ್ ಗ್ರೂಪ್ ರಚಿಸಿರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೇರಳದಲ್ಲಿ ವಿವಾದವನ್ನೇ ಸೃಷ್ಟಿಸಿರುವ 'ಮಲ್ಲು ಹಿಂದೂ ಆಫೀಸರ್ಸ್', 'ಮಲ್ಲು ಮುಸ್ಲಿಂ ಆಫೀಸರ್ಸ್' ಸೇರಿ ಹತ್ತಕ್ಕೂ ಹೆಚ್ಚು ವಾಟ್ಸ್‌ಆಯಪ್ ಗ್ರೂಪ್‌ಗಳ ಬಗ್ಗೆ ವಿವರ ಸಲ್ಲಿಸುವಂತೆ ತಿರುವನಂತಪುರ ನಗರ ಪೊಲೀಸರು ವಾಟ್ಸ್‌ಆಯಪ್ ಸಂಸ್ಥೆಗೆ ಕೋರಿದ್ದಾರೆ.
ಕೇರಳದ ಕೈಗಾರಿಕಾ ಸಚಿವಾಲಯದ ನಿರ್ದೇಶಕ ಕೆ.ಗೋಪಾಲಕೃಷ್ಣ ಅವರು ಅಕ್ಟೋಬರ್ 31ರಂದು 'ಮಲ್ಲು ಹಿಂದೂ ಆಫೀಸರ್ಸ್' ಹೆಸರಿನ ವಾಟ್ಸ್‌ಆಯಪ್ ಗ್ರೂಪ್ ರಚಿಸಿದ್ದಾರೆ ಎಂಬ ವದಂತಿಗಳು ಹರಡಿದ್ದವು. 'ಮೊಬೈಲ್ ಫೋನ್ ಹ್ಯಾಕ್ ಆಗಿದ್ದು, ನನ್ನ ಅರಿವಿಗೆ ಬಾರದೆಯೇ ವಾಟ್ಸ್‌ಆಯಪ್ ಗ್ರೂಪ್‌ಗಳು ರಚನೆಯಾಗಿವೆ. ಮೊಬೈಲ್ ಫೋನ್‌ನಲ್ಲಿ ಕೆಲವು ಅವ್ಯವಹಾರಗಳೂ ನಡೆದಿವೆ. ಈ ಎಲ್ಲದರ ಬಗ್ಗೆ ತನಿಖೆಯಾಗಬೇಕು' ಎಂದು ಕೋರಿ ಗೋಪಾಲಕೃಷ್ಣ ಅವರು ಪೊಲೀಸರಿಗೆ ದೂರು ನೀಡಿದ್ದರು.
'ದುಷ್ಕರ್ಮಿಗಳು ನನ್ನ ಮೊಬೈಲ್ ಫೋನ್ ಹ್ಯಾಕ್ ಮಾಡಿ, ಅದರಲ್ಲಿದ್ದ ಸಂಪರ್ಕ ಸಂಖ್ಯೆಗಳನ್ನು ಬಳಸಿ ಹತ್ತಕ್ಕೂ ಅಧಿಕ ವಾಟ್ಸ್‌ಆಯಪ್ ಗ್ರೂಪ್‌ಗಳನ್ನು ರಚಿಸಿದ್ದಾರೆ. ಈ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣವೇ ಆ ಎಲ್ಲ ಗ್ರೂಪ್‌ಗಳನ್ನು ಅಳಿಸಿ ಹಾಕಿದ್ದೇನೆ' ಎಂದು ಗೋಪಾಲಕೃಷ್ಣ ಅವರು ಮಾಧ್ಯಮಗಳಿಗೆ ತಿಳಿಸಿದ್ದರು.
ತನಿಖೆ ಆರಂಭ: ಪಿ.ರಾಜೀವ್
ಧರ್ಮಗಳ ಹೆಸರಿನಲ್ಲಿ ವಾಟ್ಸ್‌ಆಯಪ್ ಗ್ರೂಪ್ ರಚಿಸಿರುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲಿದೆ ಎಂದು ಕೇರಳ ಕೈಗಾರಿಕಾ ಸಚಿವ ಪಿ.ರಾಜೀವ್ ಸೋಮವಾರ ಹೇಳಿದರು.
ಈ ಕುರಿತಂತೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್, 'ಇದೊಂದು ಗಂಭೀರ ವಿಷಯವಾಗಿದ್ದು, ಸಮುದಾಯ ಆಧಾರಿತ ವಿಭಜನೆಗಳು ಕಳವಳಕಾರಿಯಾಗಿದೆ' ಎಂದು ಹೇಳಿದರು.
'ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಐಎಎಸ್ ಅಧಿಕಾರಿಗಳಿಗೆ ಸಾಮಾನ್ಯ ನೀತಿ ಸಂಹಿತೆಯಿದ್ದು, ಅದು ಸಾರ್ವಜನಿಕ ಆಡಳಿತ ಇಲಾಖೆಯಡಿಯಲ್ಲಿ ಬರುತ್ತದೆ. ಪ್ರಸ್ತುತ ನಾವು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಏನು ಮಾಡಬೇಕು ಎಂಬುವುದರ ಬಗ್ಗೆ ನಿರ್ಧರಿಸಲಿದ್ದೇವೆ' ಎಂದರು.