ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಬಯಸಿದೆ ಎಂದು ವರದಿಯಾಗಿದೆ.
ಬಿಸಿಸಿಐ ತನ್ನ ನಿರ್ಧಾರವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(ಪಿಸಿಬಿ)ತಿಳಿಸಿದೆ.
ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಕುರಿತಂತೆ ಬಿಸಿಸಿಐ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಅದು ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಬಯಸಿದೆ. ಭಾರತ ಒಳಗೊಂಡಿರುವ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬಹುರಾಷ್ಟ್ರ ಪಂದ್ಯಾವಳಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಈಗಾಗಲೇ ಕರಡು ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದು, ಭಾರತವು ತನ್ನ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಡಬೇಕಾಗಿದೆ. ಆದರೆ ತಾತ್ಕಾಲಿಕ ವೇಳಾಪಟ್ಟಿಯ ಕುರಿತು ಚರ್ಚೆ ನಡೆದಿಲ್ಲ. ಇದೀಗ ಬಿಸಿಸಿಐ ನಿರ್ಧಾರದ ಪರಿಣಾಮವಾಗಿ ವೇಳಾಪಟ್ಟಿಯನ್ನು ಬಹಿರಂಗಪಡಿಸುವ ಮೊದಲು ವೇಳಾಪಟ್ಟಿಯಲ್ಲಿ ಕೆಲವು ಮಾರ್ಪಾಡುಗಳು ನಡೆಯಬಹುದು ಎಂದು ತಿಳಿದುಬಂದಿದೆ.
ಈ ಹಿಂದಿನ ಯೋಜನೆಯ ಪ್ರಕಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿಯು ಸೋಮವಾರ ಬಿಡುಗಡೆಯಾಗಬೇಕಾಗಿತ್ತು. ಆದರೆ, ಅಗತ್ಯದ ತಿದ್ದುಪಡಿ ಮಾಡಲು ಜಾಗತಿಕ ಕ್ರಿಕೆಟ್ ಮಂಡಳಿಗೆ ಎಷ್ಟು ಸಮಯ ಬೇಕೆಂದು ನೋಡಬೇಕಾಗಿದೆ.
ದುಬೈ ಉತ್ತಮ ಆಯ್ಕೆಯಾಗಿದ್ದು, ಐಸಿಸಿ, ಈ ನಗರದಲ್ಲಿ ಹಲವಾರು ಪ್ರಮುಖ ಟೂರ್ನಮೆಂಟ್‌ಗಳನ್ನು ಆಯೋಜಿಸಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ತಲೆತೋರಿದ ಪರಿಣಾಮ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಗೆ ಇತ್ತೀಚೆಗೆ ದುಬೈ ಆತಿಥ್ಯ ವಹಿಸಿತ್ತು.
ದುಬೈನಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಲ್ಲಿ ಹೊಟೇಲ್‌ಗಳ , ಲಾಜಿಸ್ಟಿಕ್ಸ್ ಸಮಸ್ಯೆಯೂ ಇಲ್ಲ. ಅಲ್ಲಿ ಎಲ್ಲವನ್ನು ಸುಗಮವಾಗಿ ನಿಭಾಯಿಸಬಹುದು ಎಂದು ಮೂಲಗಳು ತಿಳಿಸಿವೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಫೆಬ್ರವರಿ 19ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯವು ಮಾರ್ಚ್ 9ರಂದು ನಿಗದಿಯಾಗಿದೆ. 50 ಓವರ್ ಗಳ ಪಂದ್ಯಾವಳಿಗಾಗಿ ಪಿಸಿಬಿ ಈಗಾಗಲೇ ತನ್ನ ಸ್ಟೇಡಿಯಮ್‌ಗಳನ್ನು ನವೀಕರಿಸುವ ಕಾರ್ಯವನ್ನು ಆರಂಭಿಸಿದೆ.