ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಸಮಿತಿ ನಿಯೋಗದ ಮೂಲಕ ತೆರಳಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಿತು. ಕಾಸರಗೋಡಿನ ವಿವಿಧ ಇಲಾಖೆಗಳ ನಾಮಫಲಕ ಕನ್ನಡದಲ್ಲೂ ಅಳವಡಿಸಬೇಕು, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಎಲ್ಲ ಅರ್ಜಿ ನಮೂನೆ ಕನ್ನಡದಲ್ಲಿ ಪೂರೈಸಬೇಕು, ಭಾಷ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಒದಗಿಸಲಗಿರುವ ಎಲ್ಲ ಸವಲತ್ತುಗಳನ್ನು ಜಾರಿಗೊಳಿಸಬೇಕು ಮೊದಲಾದ ಬೇಡಿಕೆಯುಳ್ಳ ಮನವಿಯನ್ನು ವಿವಿಧ ಇಲಾಖೆಗಳಿಗೆ ಸಲ್ಲಿಸಲಾಯಿತು.
ಕಾಸರಗೋಡು ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ಅವರನ್ನು ನಗರಸಭಾ ಕಚೇರಿಯಲ್ಲಿ ನಿಯೋಗ ಭೇಟಿಮಾಡಿ ವಿವಿಧ ಬೇಡಿಗಳುಳ್ಳ ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಪಿ.ಎ ಜಸ್ಟಿನ್ ಅವರು ಕನ್ನಡಿಗರ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕನ್ನಡ ಜಾಗೃತಿ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಜಯನಾರಾಯಣ, ಅಧ್ಯಕ್ಷ ಯೋಗೀಶ್ ಕೋಟೆಕಣಿ, ಕಾರ್ಯದರ್ಶಿ ಶ್ರೀಕಾಂತ್ ಕಾಸರಗೋಡು, ಉಪಾಧ್ಯಕ್ಷ ಭರತ್, ಜತೆಕಾರ್ಯದರ್ಶಿ ದಿವಾಕರ ಪಿ. ಅಶೋಕನಗರ, ಜಯಾನಂದ ಕುಮಾರ್ ಹೊಸದುರ್ಗ, ಮೋಹನ ರಾವ್, ನಗರಸಭಾ ಸದಸ್ಯೆ ವೀಣಾ ಅರುಣ್ ಶೆಟ್ಟಿ ನಿಯೋಗದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಕಾಸರಗೋಡು ಗ್ರಾಮಾಧಿಕಾರಿ ಲೀಲಾವತೀ, ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಮಧುಸೂದನ್ ಅವರಿಗೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ನಿಯೋಗ ಪ್ರತ್ಯೇಕ ಮನವಿ ಸಲ್ಲಿಸಿತು.
ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಪದಾಧಿಕಾರಿಗಳು ಕಾಸರಗೋಡು ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ಅವರಿಗೆ ಮನವಿ ಸಲ್ಲಿಸಿ ಸಮಾಲೋಚನೆ ನಡೆಸಿದರು.