ಕಾಸರಗೋಡು: ನೀಲೇಶ್ವರ ತೆರು ಅಞೂಟ್ಟಂಬಲ ವೀರಕ್ಕಾವು ಶ್ರೀ ಮೂವಾಳಂಕುಯಿ ಚಾಮುಂಡಿ ಕ್ಷೇತ್ರ ಸುಡುಮದ್ದು ದುರಂತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಕ್ಷೇತ್ರ ಸಮಿತಿಯ ಮೂವರು ಪದಾಧಿಕಾರಿಗಳ ಜಾಮೀನು ರದ್ದುಗೊಳಿಸಿದ್ದ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ತೀರ್ಪಿಗೆ ರಾಜ್ಯ ಉಚ್ಚ ನ್ಯಾಯಾಲಯ ಎರಡು ವಾರಗಳ ತಡೆಯಾಜ್ಞೆ ವಿಧಿಸಿದೆ.
ಕ್ಷೇತ್ರ ಆಡಳಿತ ಸಮಿತಿ ಪದಾಧಿಕಾರಿಗಳಾದ ಚಂದ್ರಶೇಖರನ್, ಕೆ.ಟಿ ಭರತನ್ ಹಾಗೂ ಪಟಾಕಿ ಸಿಡಿಸಿದ್ದ ರಾಜೇಶ್ ಕೊಟ್ರಚಾಲ್ ಎಂಬವರ ಜಾಮೀನು ರದ್ದುಗೊಳಿಸಲಾಗಿತ್ತು. ಆರಂಭದಲ್ಲಿ ಈ ಮೂರೂ ಮಂದಿ ಆರೋಪಿಗಳಿಗೆ ಹೊಸದುರ್ಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ ನ್ಯಾಯಾಲಯ(ದ್ವಿತೀಯ) ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿತ್ತು. ಇದರ ವಿರುದ್ಧ ಸಲ್ಲಿಸಿದ ಮನವಿ ಆಧರಿಸಿ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಾಮೀನು ಆದೇಶ ರದ್ದುಗೊಳಿಸಿದ್ದು, ಈ ನಿಟ್ಟಿನಲ್ಲಿ ರಾಜೇಶ್ ನ್ಯಾಯಾಂಗ ಬಂಧನದಲ್ಲಿದ್ದರೆ, ಚಂದ್ರಶೇಖರನ್ ಹಾಗೂ ಭರತನ್ ತಲೆಮರೆಸಿಕೊಂಡಿದ್ದರು. ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಇವರಿಬ್ಬರೂ ಹೈಕೋರ್ಟಿಗೆ ಸಲ್ಲಿಸಿದ ಮೇಲ್ಮನವಿ ಹಿನ್ನೆಲೆಯಲ್ಲಿ ಜಾಮೀನುರದ್ದುಗೊಳಿಸಿದ ಕ್ರಮಕ್ಕೆ ಎರಡು ವಾರಗಳ ತಡೆಯಾಜ್ಞೆ ವಿಧಿಸಿದ್ದು, ಮುಂದಿನ ವಿಚಾರಣೆಯನ್ನು ಡಿ. 9ಕ್ಕೆ ಹೈಕೋರ್ಟು ಮುಂದೂಡಿದೆ.
ಪಟಾಕಿ ದುರಂತದಲ್ಲಿ ಆರು ಮಂದಿ ಜೀವ ಕಳೆದುಕೊಂಡಿದ್ದು, ಹಲವು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.