ನವದೆಹಲಿ :ಕೆನಡಾ ತನ್ನ ಜನಪ್ರಿಯ ಸ್ಟೂಡೆಂಟ್ ಡೈರೆಕ್ಟ್ ಸ್ಟ್ರೀಮ್ (ಎಸ್‌ಡಿಎಸ್) ಕಾರ್ಯಕ್ರಮಕ್ಕೆ ಹಠಾತ್ ಮಂಗಳ ಹಾಡಿದ್ದು, ನ.8ರಿಂದಲೇ ಇದು ಜಾರಿಗೊಂಡಿದೆ. ಪರಿಣಾಮವಾಗಿ ಸಾವಿರಾರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಶೀಘ್ರ ವೀಸಾಗಳನ್ನು ಪಡೆಯಲು ನೆರವಾಗಿದ್ದ ತ್ವರಿತ ವ್ಯಾಸಂಗ ಪರವಾನಿಗೆ ಪ್ರಕ್ರಿಯೆಯು ಅಂತ್ಯಗೊಂಡಿದೆ.
ಕೆನಡಾದ ವಲಸೆ,ನಿರಾಶ್ರಿತರು ಮತ್ತು ಪೌರತ್ವ (ಐಆರ್‌ಸಿಸಿ) ಇಲಾಖೆಯು 2018ರಲ್ಲಿ ಆರಂಭಿಸಿದ್ದ ಎಸ್‌ಡಿಎಸ್ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಿದ ಭಾರತ,ಚೀನಾ ಮತ್ತು ಫಿಲಿಪ್ಪೀನ್ಸ್ ಸೇರಿದಂತೆ 14 ದೇಶಗಳ ವಿದ್ಯಾರ್ಥಿಗಳಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿತ್ತು.
20,635 ಕೆನಡಾ ಡಾಲರ್(ಸಿಎಡಿ) ಮೌಲ್ಯದ ಕೆನಡಿಯನ್ ಗ್ಯಾರಂಟೀಡ್ ಇನ್ವೆಸ್ಟ್‌ಮೆಂಟ್ ಸರ್ಟಿಫಿಕೇಟ್ (ಜಿಐಸಿ) ಮತ್ತು ಇಂಗ್ಲಿಷ್ ಅಥವಾ ಫ್ರೆಂಚ್ ಭಾಷಾ ಪರೀಕ್ಷಾ ಅಂಕಗಳನ್ನು ಈ ನಿರ್ದಿಷ್ಟ ಅಗತ್ಯಗಳು ಒಳಗೊಂಡಿದ್ದವು. ಸುವ್ಯವಸ್ಥಿತ ಪ್ರಕ್ರಿಯೆಯು ಯಶಸ್ವಿ ಅರ್ಜಿದಾರರಿಗೆ ಕೆಲವೇ ವಾರಗಳಲ್ಲಿ ವ್ಯಾಸಂಗ ಪರವಾನಿಗೆಯನ್ನು ಪಡೆಯಲು ಅವಕಾಶ ಕಲ್ಪಿಸಿತ್ತು. ಭಾರತೀಯ ಅರ್ಜಿದಾರರಿಗೆ ಪ್ರಮಾಣಿತ ವಿಧಾನದಡಿ ಅರ್ಜಿಗಳ ಸಂಸ್ಕರಣೆಯು ಹೆಚ್ಚಾಗಿ ಎಂಟು ವಾರಗಳನ್ನು ತೆಗೆದುಕೊಳ್ಳುತ್ತಿತ್ತು.
ಎಸ್‌ಡಿಎಸ್ ರದ್ದತಿಯು ವಸತಿ ಮತ್ತು ಸಂಪನ್ಮೂಲ ಕೊರತೆಗಳ ನಡುವೆ ತನ್ನ ಅಂತರರಾಷ್ಟ್ರೀಯ ವಿದ್ಯಾರ್ಥಿ ಜನಸಂಖ್ಯೆಯನ್ನು ನಿಯಂತ್ರಿಸಲು ಕೆನಡಾದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತಿದೆ. ತನ್ನ 2024ರ ನೀತಿ ಬದಲಾವಣೆಗಳ ಭಾಗವಾಗಿ ಸರಕಾರವು 2025ನೇ ಸಾಲಿಗೆ ಸ್ನಾತಕೋತ್ತರ ಕಾರ್ಯಕ್ರಮಗಳ ಸಹಿತ ಶಿಕ್ಷಣದ ಎಲ್ಲ ಹಂತಗಳು ಒಳಗೊಂಡಂತೆ 4,37,000 ಹೊಸ ವ್ಯಾಸಂಗ ಪರವಾನಿಗೆಗಳ ಮಿತಿಯನ್ನು ನಿಗದಿಗೊಳಿಸಿದೆ.
ಸರಕಾರವು ತೆಗೆದುಕೊಂಡಿರುವ ಇನ್ನಷ್ಟು ಬಿಗಿಕ್ರಮಗಳಲ್ಲಿ ವಿದ್ಯಾರ್ಥಿಗಳು ಪೋಸ್ಟ್-ಗ್ರಾಜ್ಯುಯೇಷನ್ ವರ್ಕ್ ಪರ್ಮಿಟ್‌ಗೆ ಅರ್ಹರಾಗಲು ಕಠಿಣವಾದ ಭಾಷಾ ಮತ್ತು ಶೈಕ್ಷಣಿಕ ಮಾನದಂಡಗಳು,ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಗಾತಿಗಳಿಗೆ ಸೀಮಿತ ವರ್ಕ್ ಪರ್ಮಿಟ್‌ಗಳು ಮತ್ತು ಹೆಚ್ಚಿನ ಆರ್ಥಿಕ ಪುರಾವೆ ಅಗತ್ಯಗಳು ಸೇರಿವೆ.
2023ರಲ್ಲಿ ದಾಖಲೆಯ 8,07,000 ವ್ಯಾಸಂಗ ಪರವಾನಿಗೆಗಳನ್ನು ನೀಡಿದ್ದ ಕೆನಡಾ ವಸತಿ ಮತ್ತು ಸೇವೆಗಳ ಮೇಲಿನ ಒತ್ತಡವನ್ನು ನಿವಾರಿಸುವ ಅಗತ್ಯದೊಂದಿಗೆ ತನ್ನ ಅಂತರರಾಷ್ಟ್ರೀಯ ಶಿಕ್ಷಣ ಕ್ಷೇತ್ರದ ಪ್ರಯೋಜನಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆಗಳು ಬಂದಿವೆ. ಪರಿಣಾಮವಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಈಗ ವೀಸಾಗಳನ್ನು ಪಡೆಯಲು ಸುದೀರ್ಘ ಸಮಯ ಕಾಯುವಿಕೆ ಮತ್ತು ಹೆಚ್ಚಿನ ಅರ್ಹತಾ ಮಾನದಂಡಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಈಗ ತಮ್ಮ ವೀಸಾ ಯೋಜನೆಯನ್ನು ಹಿಂದಿಗಿಂತ ಮುಂಚೆಯೇ ಆರಂಭಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.