ಮುಂಬೈ: ರಾಜಕೀಯವಾಗಿ ವಿಭಜಿತವಾಗಿರುವಂತೆ ಕಾಣಿಸುತ್ತಿರುವ ಮಹಾರಾಷ್ಟ್ರದಲ್ಲಿ ಹತ್ತಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯಲು ಹೋರಾಟ ನಡೆಸುತ್ತಿವೆ.
ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ಏರುತ್ತಿದ್ದು, ಕಾಂಗ್ರೆಸ್‌ನ 'ಸಂವಿಧಾನ ಉಳಿಸಿ' ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿಯು 'ಬಟೇಂಗೆ ತೊ ಕಟೇಂಗೆ' (ಒಗ್ಗಟ್ಟು ಇಲ್ಲದಿದ್ದರೆ ನಮ್ಮನ್ನು ಮುಗಿಸುತ್ತಾರೆ) ನಿರೂಪಣೆಯನ್ನು ಮುಂದಿಟ್ಟುಕೊಂಡು ಮತಗಳಿಕೆಗೆ ಕಸರತ್ತು ನಡೆಸಿದೆ.
ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿ ಬಿಜೆಪಿಯ ಮಿತ್ರಪಕ್ಷಗಳಾದ ಶಿವಸೇನಾ (ಶಿಂದೆ ಬಣ) ಮತ್ತು ಎನ್‌ಸಿಪಿಯು (ಅಜಿತ್ ಪವಾರ್ ಬಣ), ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಮೇಲೆ ಒತ್ತು ನೀಡಿ ಪ್ರಚಾರ ಅಭಿಯಾನ ನಡೆಸುತ್ತಿವೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೀಡಿರುವ 'ಬಟೇಂಗೆ ತೊ ಕಟೇಂಗೆ' ಹೇಳಿಕೆಯಿಂದ ಎನ್‌ಸಿಪಿ ಅಂತರ ಕಾಯ್ದುಕೊಂಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಕೂಡ ಬಿಜೆಪಿಯ 'ಉಗ್ರ ಹಿಂದುತ್ವ'ದ ಪ್ರಚಾರ ಶೈಲಿಯು, ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ತಾನು ನಡೆಸುತ್ತಿರುವ ಪ್ರಚಾರ ಅಭಿಯಾನವನ್ನು ಮಂಕಾಗಿಸುವುದೇ ಎಂಬ ಅವಲೋಕನ ನಡೆಸುತ್ತಿದೆ.
'ಮಹಾಯುತಿ' ಮೈತ್ರಿಕೂಟದಲ್ಲಿ ಎನ್‌ಸಿಪಿ ಗರಿಷ್ಠ ಸಂಖ್ಯೆಯ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷವು ಯೋಗಿ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಇದು ಪ್ರಮುಖ ಕಾರಣ. 'ಎನ್‌ಸಿಪಿ 57 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅದರಲ್ಲಿ ಶೇ 10ರಷ್ಟು ಮುಸ್ಲಿಂ ಅಭ್ಯರ್ಥಿಗಳು ಇದ್ದಾರೆ' ಎಂದು ಅಜಿತ್ ಪವಾರ್ ಅವರಿಗೆ ಆಪ್ತರಾಗಿರುವ ನಾಯಕರೊಬ್ಬರು ಹೇಳಿದ್ದಾರೆ.
ಆದರೆ, ಎನ್‌ಡಿಎಯ ಅತಿದೊಡ್ಡ ಪಾಲುದಾರ ಎನಿಸಿರುವ ಬಿಜೆಪಿ, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ತನ್ನದೇ ಆದ ತಂತ್ರಗಳನ್ನು ಅನುಸರಿಸಬೇಕಿದೆ. ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಲ್ಲಿ 'ಕಮಲ ಪಾಳಯ' 148ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಬಿಜೆಪಿ, ವಿದರ್ಭ ಮತ್ತು ಮರಾಠವಾಡ ಪ್ರದೇಶದಲ್ಲಿ ಕಾಂಗ್ರೆಸ್ ಜತೆ ಮತ್ತೆ ನೇರ ಸ್ಪರ್ಧೆಗೆ ಸಿಲುಕಿದೆ. ಅಲ್ಪಸಂಖ್ಯಾತರ ಧ್ರುವೀಕರಣ ಮತ್ತು ಜಾತಿ ಸಮೀಕರಣವು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ಎರಡು ಪ್ರದೇಶಗಳಲ್ಲಿ ಎದ್ದುಕಂಡಿದ್ದವು.
ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಂತ ನಿಕಟ ಹಣಾಹಣಿ ನಡೆದಿದೆ. ಮಹಾ ವಿಕಾಸ ಆಘಾಡಿ (ಎಂವಿಎ) ಮತ್ತು ಮಹಾಯುತಿ ನಡುವಣ ಮತಗಳ ವ್ಯತ್ಯಾಸವು ಶೇ 0.3ಕ್ಕೂ ಕಡಿಮೆಯಿತ್ತು. ಆದರೆ ಈ ಅಲ್ಪ ವ್ಯತ್ಯಾಸವು 'ಇಂಡಿಯಾ' ಮೈತ್ರಿಕೂಟಕ್ಕೆ 30 ಸ್ಥಾನಗಳನ್ನು ತಂದುಕೊಟ್ಟಿದೆ. ಎನ್‌ಡಿಎಗೆ 17 ಸ್ಥಾನಗಳು ಮಾತ್ರ ದೊರೆತಿವೆ.
ಲೋಕಸಭಾ ಚುನಾವಣೆಯ ಮತಗಳಿಕೆಯನ್ನು ವಿಧಾನಸಭಾ ಕ್ಷೇತ್ರವಾರು ವಿಂಗಡಿಸಿ ನೋಡಿದಾಗ ಎನ್‌ಡಿಎಗೆ 131 ಕ್ಷೇತ್ರಗಳಲ್ಲಿ ಮುನ್ನಡೆ ದೊರೆತಿದೆ. ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ವೇಳೆ ಈ 131ರಲ್ಲಿ 79 ಕ್ಷೇತ್ರಗಳನ್ನು ಬಿಜೆಪಿಗೆ ಹಂಚಿಕೆ ಮಾಡಲಾಗಿದೆ.
ಕಾಂಗ್ರೆಸ್‌ನ 'ಸಂವಿಧಾನ ಉಳಿಸಿ' ಅಭಿಯಾನದ ಪ್ರಭಾವವು ಕಳೆದ ನಾಲ್ಕು ತಿಂಗಳುಗಳಲ್ಲಿ ಬಹಳ ಕಡಿಮೆಯಾಗಿದೆ ಎಂದು ಬಿಜೆಪಿ ಭಾವಿಸಿದೆ. ಆದರೆ ಪ್ರಚಾರದ ಕೊನೆಯ ದಿನಗಳಲ್ಲಿ ಅದೇ ನಿರೂಪಣೆಯನ್ನು ಪುನರುಜ್ಜೀವನಗೊಳಿಸುವ ಕಾಂಗ್ರೆಸ್‌ನ ಹೊಸ ಪ್ರಯತ್ನಗಳ ಬಗ್ಗೆ ಜಾಗರೂಕವಾಗಿದೆ.
ಇದೇ ಕಾರಣದಿಂದ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಯೋಗಿ ಅವರ ಹೇಳಿಕೆಯನ್ನು ಮುನ್ನೆಲೆಗೆ ತಂದಿದೆ. ಯೋಗಿ ಹೇಳಿಕೆಯನ್ನು ಅನುಸರಿಸಿ ಪ್ರಧಾನಿ ನರೇಂದ್ರ ಮೋದಿ ಅವರು 'ಏಕ್ ಹೇ ತೊ ಸೇಫ್ ಹೆ' (ಒಗ್ಗಟ್ಟಿನಿಂದ ಇದ್ದರೆ ನಾವು ಸುರಕ್ಷಿತವಾಗಿರುತ್ತೇವೆ) ಎಂಬ ಹೇಳಿಕೆ ಕೊಟ್ಟಿದ್ದಾರೆ. ಜಾತಿ ಧ್ರುವೀಕರಣವೇ ಈ ಹೇಳಿಕೆಗಳ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೆಲ ದಿನಗಳ ಹಿಂದೆ ನಾಗ್ಪುರದಲ್ಲಿ ಪಕ್ಷದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ 'ಸಂವಿಧಾನದ ತತ್ವಗಳನ್ನು ಆರ್‌ಎಸ್‌ಎಸ್ ವಿರೋಧಿಸುತ್ತದೆ' ಎಂದು ಆರೋಪಿಸಿದ್ದರು. ಜಾತಿಗಣತಿಗೆ ಒತ್ತಾಯಿಸಿದ್ದ ಅವರು ಮೀಸಲಾತಿ ಮೇಲಿನ ಶೇ 50ರ ಮಿತಿಯನ್ನು ಮರುಪರಿಶೀಲಿಸಬೇಕು ಎಂದಿದ್ದರು.
ಜಾತಿಗಣತಿ ಮೇಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಲು, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವು ವಿಧಾನಸಭಾ ಚುನಾವಣೆಯ ವೇಳೆ ನೀಡಿದ್ದ ಭರವಸೆಯಂತೆ ಜಾತಿಗಣತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಕಾಂಗ್ರೆಸ್‌ನ ಈ ತಂತ್ರಗಳಿಗೆ ಪ್ರತಿಯಾಗಿ ಬಿಜೆಪಿಯ 'ಉಗ್ರ ಹಿಂದುತ್ವ' ಪ‍್ರಚಾರವು ಶಿಂದೆ ನೇತೃತ್ವದ ಶಿವಸೇನಾಗೂ ಸರಿಹೊಂದುತ್ತದೆ. ಆದರೆ, ರಾಜಕೀಯವಾಗಿ ವಿಭಜಿತವಾಗಿರುವ ಮಹಾರಾಷ್ಟ್ರದಲ್ಲಿ ಈ ಪ್ರಚಾರ ತಂತ್ರ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದರಲ್ಲಿ ಯಾರಿಗೂ ಖಚಿತತೆಯಿಲ್ಲ.
ರೈತರು, ಮಹಿಳೆಯರಿಗೆ ಭರವಸೆಗಳ ಮಹಾಪೂರ
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಮಹಾ ವಿಕಾಸ ಆಘಾಡಿ (ಎಂವಿಎ) ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ದೊಡ್ಡ ಮತದಾರ ವರ್ಗವಾಗಿರುವ ಮಹಿಳೆಯರಿಗೆ ಮತ್ತು ರೈತರಿಗೆ ಹಲವು ಭರವಸೆಗಳನ್ನು ನೀಡಲಾಗಿದೆ.
ರೈತರ ಸಾಲ ಮನ್ನಾ ಮತ್ತು ಮತಾಂತರ ವಿರೋಧಿ ಕಾನೂನೂ ರೂಪಿಸುವುದಾಗಿ ಬಿಜೆಪಿ ಹೇಳಿದೆ. ಜಾತಿ ಗಣತಿ ನಡೆಸಲು ಬದ್ಧವಾಗಿರುವುದಾಗಿ ಘೋಷಿಸಿರುವ ಎಂವಿಎ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಮತ್ತು ತಿಂಗಳಿಗೆ ₹3,000 ನೆರವು ನೀಡುವುದಾಗಿ ತಿಳಿಸಿದೆ.
ಚುನಾವಣಾ ಕಾರ್ಯತಂತ್ರ
'ಮಹಾಯುತಿ' ಮೈತ್ರಿಕೂಟದಲ್ಲಿ ಗರಿಷ್ಠ ಸಂಖ್ಯೆಯ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾರಣ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯು ಯೋಗಿ ಆದಿತ್ಯನಾಥ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ
ಕಾಂಗ್ರೆಸ್‌ನ 'ಸಂವಿಧಾನ ಉಳಿಸಿ' ಅಭಿಯಾನದ ಪ್ರಭಾವವು ಕಳೆದ ನಾಲ್ಕು ತಿಂಗಳುಗಳಲ್ಲಿ ಬಹಳ ಕಡಿಮೆಯಾಗಿದೆ ಎಂಬುದು ಬಿಜೆಪಿಯ ಭಾವನೆ
ಲೋಕಸಭಾ ಚುನಾವಣೆ ವೇಳೆ ವಿದರ್ಭ ಮತ್ತು ಮರಾಠವಾಡ ಭಾಗದಲ್ಲಿ ಅಲ್ಪಸಂಖ್ಯಾತರ ಧ್ರುವೀಕರಣ ಹಾಗೂ ಜಾತಿ ಸಮೀಕರಣವು ಎದ್ದುಕಂಡಿದ್ದವು.