ಹೈದರಾಬಾದ್: ತೆಲಂಗಾಣದಲ್ಲಿ ಬುಧವಾರ ಜಾತಿಗಣತಿಗೆ ಚಾಲನೆ ನೀಡಲಾಗಿದೆ.
ಸಾಮಾಜಿಕ, ಆರ್ಥಿಕ, ರಾಜಕೀಯ, ಉದ್ಯೋಗ ಮತ್ತು ಜಾತಿ ಕುರಿತಾದ ಸಮಗ್ರ ಗಣತಿಯು ಇದಾಗಿದೆ.
ಜಾತಿಗಣತಿ ನಡೆಸುವ ಸಿಬ್ಬಂದಿಗೆ ಸರ್ಕಾರ ತರಬೇತಿಯನ್ನು ನೀಡಿದ್ದು, ಈ ತಿಂಗಳ ಅಂತ್ಯದಲ್ಲಿ ಗಣತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಗ್ರೇಟರ್ ಹೈದರಾಬಾದ್ ಪಾಲಿಕೆ ಕಚೇರಿಯಲ್ಲಿ ಗಣತಿಗೆ ಚಾಲನೆ ನೀಡಿದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಅವರು, 'ಮಾಹಿತಿಗಳನ್ನು ಗೋಪ್ಯವಾಗಿ ಇರಿಸಲಾಗುವುದು. ಅಸಮಾನತೆಯನ್ನು ಹೋಗಲಾಡಿಸಿ, ಎಲ್ಲರಿಗೂ ಸಮಾನ ನ್ಯಾಯ ಸಿಗುವಂತೆ ಮಾಡುವುದು ಈ ಗಣತಿಯ ಉದ್ದೇಶ' ಎಂದು ತಿಳಿಸಿದ್ದಾರೆ.
'ಸಮಾಜದ ವಿವಿಧ ವರ್ಗಗಳ ಕಲ್ಯಾಣ ಮತ್ತು ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಲು ಜಾತಿಗಣತಿ ಸಹಕಾರಿಯಾಗುತ್ತದೆ' ಎಂದು ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಿ.ಶ್ರೀಧರ್ ಬಾಬು ಅವರು ಹೇಳಿದ್ದಾರೆ.