HEALTH TIPS

ಅಗತ್ಯವಿರುವವರಿಗೆ ನೆರವಾಗಿದ್ದೇ ದೊಡ್ಡ ಸಂತಸ: ನಿರ್ಗಮಿತ CJI ಡಿ.ವೈ. ಚಂದ್ರಚೂಡ್

          ವದೆಹಲಿ: 'ಈ ಹುದ್ದೆಯಲ್ಲಿದ್ದ ಅಷ್ಟೂ ದಿನ ಅಗತ್ಯ ಇರುವವರಿಗೆ, ನಾನು ಎಂದೂ ಭೇಟಿಯಾಗದವರಿಗೆ ನೆರವಾಗಿದ್ದಕ್ಕಿಂತ ದೊಡ್ಡ ಸಂತಸ ನನಗೆ ಬೇರೊಂದಿಲ್ಲ' ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಶುಕ್ರವಾರ ನಿವೃತ್ತಿಯಾದ ನ್ಯಾ.  ಡಿ.ವೈ. ಚಂದ್ರಚೂಡ್‌ ಹೇಳಿದರು.

         ಬೀಳ್ಕೊಡುಗೆಯ ಭಾಗವಾಗಿ ಶುಕ್ರವಾರ ಮಧ್ಯಾಹ್ನ ನಡೆದ ನಾಲ್ವರು ನ್ಯಾಯಮೂರ್ತಿಗಳನ್ನೊಳಗೊಂಡ ವಿದ್ಯುಕ್ತ ಪೀಠದಲ್ಲಿ ಕೂತು ಮಾತನಾಡಿದ ಅವರು, 'ಮುಖ್ಯ ನ್ಯಾಯಮೂರ್ತಿಯಾಗಿ ಸಾಧಿಸಿದ ಕೆಲಸದೊಂದಿಗೆ, ದೇಶ ಸೇವೆಗೆ ದೊರೆತ ಅವಕಾಶಕ್ಕಾಗಿಯೂ ನಾನು ಧನ್ಯತೆ ಅರ್ಪಿಸುತ್ತೇನೆ' ಎಂದರು.

       ಪೀಠದಲ್ಲಿ ಮುಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಇದ್ದರು.

       ನಿವೃತ್ತಿಯ ದಿನ ನ್ಯಾ. ಖನ್ನಾ, ವಕೀಲರ ಸಂಘದ ಮುಖಂಡರು, ಅಟಾರ್ನಿ ಜನರಲ್‌, ಸಾಲಿಸಿಟರ್ ಜನರಲ್‌, ಸುಪ್ರೀಂ ಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷ ಕಪಿಲ್ ಸಿಬಲ್‌ ಅವರು ಚಂದ್ರಚೂಡ್ ಅವರ ಕುರಿತು ಮಾತುಗಳನ್ನಾಡಿದರು.

       'ಈ ಹುದ್ದೆಯಲ್ಲಿರುವಷ್ಟು ದಿನ ನನಗೆ ಪ್ರೇರಣೆಯಾಗಿದ್ದು ಇಲ್ಲಿ ನೆರೆದಿರುವ ಪ್ರತಿಯೊಬ್ಬರೂ. ಏಕೆಂದರೆ, ನಾನು ಇಲ್ಲಿದ್ದ ಪ್ರತಿಯೊಂದು ದಿನವೂ ಹೊಸತನ್ನು ಕಲಿತಿದ್ದೇನೆ. ಸಮಾಜಕ್ಕೆ ನೆರವಾಗುವ ಕೆಲಸ ಮಾಡದ ಒಂದು ದಿನವೂ ಇರಲಿಲ್ಲ. ನಾವು ಎಂದೂ ಭೇಟಿಯಾಗದ, ಪರಿಚಯವೇ ಇಲ್ಲದವರ ಬದುಕಿನಲ್ಲಿ ನಾವು ಬದಲಾವಣೆ ತರಬಹುದಾದರೆ ಅಥವಾ ನೆರವಾಗಬಹುದಾದರೆ ಅದಕ್ಕಿಂತ ಸಂತಸ ಬೇರೇನಿದೆ' ಎಂದು ಅವರು ಹೇಳಿದರು.

      ತಮ್ಮ ಭಾಷಣದಲ್ಲಿ ವಿದ್ಯಾರ್ಥಿ ದಿಸೆಯನ್ನು ಹಾಗೂ ಯುವ ವಕೀಲರಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಮಾಡಿದ ಕ್ಷಣಗಳನ್ನು ಅವರು ನೆನೆದರು. 'ಸುಪ್ರೀಂ ಕೋರ್ಟ್‌ನಲ್ಲಿ ನನ್ನ ವೃತ್ತಿ ಬದುಕನ್ನು ಕಳೆಯಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ಇಲ್ಲಿ ಕಾನೂನು ಜ್ಞಾನವನ್ನು ಪಡೆಯುವುದರ ಜತೆಗೆ ನನ್ನ ಒಳನೋಟವೂ ವೃದ್ಧಿಸಿತು' ಎಂದಿದ್ದಾರೆ.

       'ಈ ಸ್ಥಾನವನ್ನು ಈವರೆಗೂ ಅಲಂಕರಿಸಿದ ಮಹನೀಯರು ಹಾಗೂ ನನ್ನ ಜವಾಬ್ದಾರಿಗಳು ಈ ಹುದ್ದೆಯಲ್ಲಿದ್ದ ಅಷ್ಟೂ ದಿನ ನೆನಪಾಗಿವೆ. ಈ ಹುದ್ದೆ ನನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಬದಲಿಗೆ ಸಂಸ್ಥೆಯ ಘನತೆ ಎತ್ತಿ ಹಿಡಿಯಲು ನನಗೆ ದೊರೆತ ಅವಕಾಶ ಎಂದೇ ನಾನು ಭಾವಿಸಿದ್ದೇನೆ' ಎಂದು ಚಂದ್ರಚೂಡ್ ಹೇಳಿದ್ದಾರೆ.

       ತಮ್ಮ ಸಹೋದ್ಯೋಗಿಗಳನ್ನು ನೆನೆದ ನ್ಯಾ. ಚಂದ್ರಚೂಡ್‌, ವಿಶೇಷವಾಗಿ ನ್ಯಾ. ಪರ್ದಿವಾಲಾ ಹಾಗೂ ನ್ಯಾ. ಮಿಶ್ರಾ ಅವರೊಂದಿಗೆ ಪೀಠವನ್ನು ಹಂಚಿಕೊಂಡ ಕ್ಷಣಗಳನ್ನು ನೆನಪಿಸಿಕೊಂಡರು. ಜತೆಗೆ ಸುಪ್ರೀಂ ಕೋರ್ಟ್‌ನ ಭವಿಷ್ಯ ಕುರಿತೂ ವಿಶ್ವಾಸ ವ್ಯಕ್ತಪಡಿಸಿದರು.

        ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು, ಪ್ರತಿಯೊಬ್ಬ ಸಿಬ್ಬಂದಿ, ವಕೀಲರಿಗೆ ಧನ್ಯವಾದ ಅರ್ಪಿಸಿದ ನ್ಯಾ. ಚಂದ್ರಚೂಡ್‌, 'ತನ್ನಿಂದ ನಡೆದಿರಬಹುದಾದ ಉದ್ದೇಶಪೂರ್ವಕವಲ್ಲದ ತಪ್ಪುಗಳು ಹಾಗೂ ತಪ್ಪು ಗ್ರಹಿಕೆಗಳಿಗೆ ಕ್ಷಮೆ ಕೋರುತ್ತೇನೆ' ಎಂದರು.

         ಮುಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾತನಾಡಿ, 'ಕಠಿಣವಾಗಬಹುದಾಗಿದ್ದ ನನ್ನ ಕೆಲಸವನ್ನು ನೀವು ಸರಳಗೊಳಿಸಿದ್ದೀರಿ. ನಿಮ್ಮ ಕಾರ್ಯಗಳನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ನಿಮ್ಮ ಚಿರಯವ್ವನದ ಗುಟ್ಟು ಇಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಚರ್ಚಿತ ವಿಷಯವಾಗಿತ್ತು. ನಿಮ್ಮ ವಯಸ್ಸಿನ ಕುರಿತು ಆಸ್ಟ್ರೇಲಿಯಾದ ಹಲವರು ನನ್ನ ಬಳಿ ಕೇಳಿದ್ದಾರೆ' ಎಂದು ನಗೆಚಾಟಿ ಬೀಸಿದರು.

ನ್ಯಾ. ಡಿ.ವೈ. ಚಂದ್ರಚೂಡ್ ಕುರಿತು...:

     ನ್ಯಾ. ಚಂದ್ರಚೂಡ್ ಅವರ ತಂದೆ ವೈ.ವಿ. ಚಂದ್ರಚೂಡ್ ಅವರು 1978ರಿಂದ 1985ರವರೆಗೆ ಸುಪ್ರೀಂ ಕೋರ್ಟ್‌ನ ದೀರ್ಘಕಾಲಿಕ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಡಿ.ವೈ. ಚಂದ್ರಚೂಡ್ ಅವರು 2022ರ ನ. 9ರಂದು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು.

       1959ರ ನ. 11ರಂದು ಜನಿಸಿದ ಚಂದ್ರಚೂಡ್ ಅವರು ಕಾನೂನು ವಿಷಯವನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿದವರು. ದೆಹಲಿಯ ಸೇಂಟ್ ಸ್ಟೀಫನ್ಸ್‌ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿ, ದೆಹಲಿ ವಿಶ್ವವಿದ್ಯಾಲಯ ಆವರಣದಲ್ಲಿರುವ ಕಾನೂನು ಕೇಂದ್ರದಿಂದ ಕಾನೂನು ಪದವಿ, ನಂತರ ಹಾರ್ವರ್ಡ್‌ ಕಾನೂನು ಶಾಲೆಯಿಂದ ಸ್ನಾತಕೋತ್ತರ ಪದವಿ ಹಾಗೂ ನ್ಯಾಯ ವಿಜ್ಞಾನ     ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ನ್ಯಾ. ಚಂದ್ರಚೂಡ್ ಅವರು ಬಾಲ್ಯದಲ್ಲಿ ಕ್ರಿಕೆಟ್ ಕುರಿತು ಅಪಾರ ಆಸಕ್ತಿ ಹೊಂದಿದ್ದರು. 1998ರಲ್ಲಿ ಬಾಂಬೆ ಹೈಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು. 2020ರಲ್ಲಿ ಅದೇ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮೊದಲು ಸಹಾಯಕ ಸಾಲಿಸಿಟರ್ ಜನರಲ್‌ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. 2013ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದರು.

ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.

ಜನಪರ,  ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ

ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.

ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.

ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.


ಇದು ಗಡಿನಾಡು ಕಾಸರಗೋಡಿನ ಜನಧ್ವನಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries