ನವದೆಹಲಿ: 'ಸುಪ್ರೀಂ ಕೋರ್ಟ್‌ಗೆ ಸಾಂವಿಧಾನಿಕ ಹೊಣೆಗಾರಿಕೆ ಇದೆ. ಹೀಗಾಗಿ, ಮಣಿಪುರದಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಮರೆ ಮಾಚುವ ಪ್ರಯತ್ನಗಳನ್ನು ತಾನು ಮೆಚ್ಚುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ರಾಜ್ಯದಲ್ಲಿ ಕಂಡುಬಂದ ಹಿಂಸಾಚಾರದಲ್ಲಿ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಪಾತ್ರವಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೊವೊಂದರ ಸತ್ಯಾಸತ್ಯತೆ ಪರಿಶೀಲನೆಗೆ ಒಪ್ಪಿಗೆ ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ಅಲ್ಲದೇ, ಮುಖ್ಯಮಂತ್ರಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ತುಣುಕನ್ನು ದೃಢೀಕರಿಸುವ ಸಾಕ್ಷ್ಯಗಳನ್ನು ಒದಗಿಸುವಂತೆ 'ಕುಕಿ ಆರ್ಗನೈಜೇಷನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್' ಗೆ ನ್ಯಾಯಪೀಠ ಸೂಚಿಸಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಈ ಕುರಿತ ಅರ್ಜಿ ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರೂ ಪೀಠದಲ್ಲಿದ್ದಾರೆ.
'ನ್ಯಾಯಮೂರ್ತಿಗಳು ದಂತಗೋಪುರದಲ್ಲಿ ಕುಳಿತಿರುವುದಿಲ್ಲ. ಈ ಕಾರಣಕ್ಕಾಗಿಯೇ, ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ಅವರು ವಜಾಗೊಳಿಸಿಲ್ಲ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಸಿಜೆಐ ಚಂದ್ರಚೂಡ್ ಹೇಳಿದರು.
ಇದಕ್ಕೂ ಮುನ್ನ ವಿಚಾರಣೆ ವೇಳೆ, 'ಕುಕಿ ಆರ್ಗನೈಜೇಷನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್' ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಮುಖ್ಯಮಂತ್ರಿ ಸಿಂಗ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ 'ವಿಷಲ್ ಬ್ಲೋವರ್'ವೊಬ್ಬರು ಒದಗಿಸಿದ್ದ ವಿಡಿಯೊ ಕುರಿತು ಪ್ರಸ್ತಾಪಿಸಿದರು.
'ದಂಗೆಗೆ ನಾನೇ ಪ್ರಚೋದನೆ ನೀಡಿದ್ದು' ಎಂಬುದಾಗಿ ಸಿ.ಎಂ ಬಿರೇನ್ ಸಿಂಗ್ ಹೇಳುತ್ತಿರುವಂತಹ ದೃಶ್ಯಗಳು ವಿಡಿಯೊದಲ್ಲಿದೆ. ಸಿಂಗ್ ಅವರೇ ಶಸ್ತ್ರಾಸ್ತ್ರಗಳ ಲೂಟಿಗೆ ಅನುಮತಿ ನೀಡಿದ್ದು ಹಾಗೂ ಅವುಗಳನ್ನು ಲೂಟಿ ಮಾಡಿದವರನ್ನು ರಕ್ಷಿಸಿದ್ದು' ಎಂದು ಪೀಠಕ್ಕೆ ತಿಳಿಸಿದರು.
ಮಣಿಪುರ ಸರ್ಕಾರ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಈ ವಿಷಯ ಕುರಿತು ತನಿಖೆ ನಡೆಯುತ್ತಿದೆ' ಎಂದರು.
'ಮಣಿಪುರ ಸರ್ಕಾರ ನಡೆಸುತ್ತಿರುವ ತನಿಖೆಯೇ ಪ್ರಶ್ನಾರ್ಹವಾಗಿದೆ. 'ವಿಷಲ್ ಬ್ಲೋವರ್' ಸ್ವತಃ ಈ ವಿಡಿಯೊ ತುಣುಕುಗಳನ್ನು ರಾಜ್ಯ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಲಂಬಾ ಆಯೋಗಕ್ಕೆ ಜುಲೈನಲ್ಲಿ ನೀಡಿದ್ದಾರೆ. ಈ ವರೆಗೆ ಯಾವುದೇ ಕ್ರಮವಾಗಿಲ್ಲ' ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಆಗ, 'ಅರ್ಜಿದಾರರು ಸುಪ್ರೀಂ ಕೋರ್ಟ್ ಬದಲಾಗಿ ಹೈಕೋರ್ಟ್‌ಗೆ ಮೇಲ್ಕನವಿ ಸಲ್ಲಿಸಬೇಕಿತ್ತು' ಎಂದು ಮೆಹ್ತಾ ವಾದಿಸಿದರು.
'ಇದು ವಿಶೇಷ ಪ್ರಕರಣ. ಈ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ಈಗಾಗಲೇ ಒಂದು ಸಮಿತಿಯನ್ನು ನೇಮಕ ಮಾಡಿದೆ' ಎಂದು ಭೂಷಣ್ ಹೇಳಿದರು.
ಆಗ, ವಿಡಿಯೊದಲ್ಲಿನ ದೃಶ್ಯಗಳನ್ನು ದೃಢೀಕರಿಸುವ ಸಾಕ್ಷ್ಯಗಳನ್ನು ಸಲ್ಲಿಸುವಂತೆ ಪ್ರಶಾಂತ್ ಭೂಷಣ್ ಅವರಿಗೆ ಪೀಠ ಸೂಚಿಸಿತು.
ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.
ಜನಪರ, ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ
ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.
ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.
ಇದು ಗಡಿನಾಡು ಕಾಸರಗೋಡಿನ ಜನಧ್ವನಿ.