ಬಾಕು : 'ತಾಪಮಾನ ಬದಲಾವಣೆ ಸವಾಲುಗಳನ್ನು ಎದುರಿಸಲು ಈಗ ಬದ್ಧವಾಗಿರುವಂತೆ ಅಭಿವೃದ್ಧಿ ರಾಷ್ಟ್ರಗಳು ವಾರ್ಷಿಕ 1 ಟ್ರಿಲಿಯನ್ ಡಾಲರ್ (₹84 ಲಕ್ಷ ಕೋಟಿ) ಆರ್ಥಿಕ ನೆರವು ನೀಡಬೇಕು, ತಡವಾದರೆ ಈ ಮೊತ್ತ ಇನ್ನಷ್ಟು ಹೆಚ್ಚಲಿದೆ' ಎಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಚ್ಚರಿಸಿವೆ.
ಹಸಿರು ಇಂಧನ ಗುರಿ ಸಾಧನೆ ಹಾಗೂ ಪ್ರತಿಕೂಲ ಹವಾಮಾನ ಪರಿಣಾಮಗಳಿಂದ ರಕ್ಷಣೆಗೆ ಇದು ಅಗತ್ಯ ಎಂದೂ ಭಾರತ ಸೇರಿದಂತೆ ನಾಲ್ಕು ಅಬಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಹಕ್ಕೊತ್ತಾಯ ಮಾಡಿವೆ.
ತಾಪಮಾನ ಬದಲಾವಣೆ ಕುರಿತಂತೆ ಇಲ್ಲಿ ನಡೆಯುತ್ತಿರುವ ವಾರ್ಷಿಕ 'ಸಿಒಪಿ29' ಶೃಂಗಸಭೆಯಲ್ಲಿ ನಡೆದ ವಿಸ್ತೃತ ಚರ್ಚೆಯ ಕೇಂದ್ರ ಬಿಂದು ಬಹುತೇಕ ಆರ್ಥಿಕ ನೆರವು ಕುರಿತ ವಿಷಯವೇ ಆಗಿತ್ತು.
ಶ್ರೀಮಂತ, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಮತ್ತು ಖಾಸಗಿ ವಲಯಗಳು ತಾಪಮಾನ ಕ್ರಿಯಾ ಚಟುವಟಿಕೆಗಳಿಗೆ ವಾರ್ಷಿಕ ಎಷ್ಟು ಮೊತ್ತದ ನೆರವು ನೀಡಲಿವೆ ಅಥವಾ ನೀಡಬೇಕಾದ ನೆರವು ಕುರಿತಂತೆ ಹೊಸ ಗುರಿಗೆ ಈ ರಾಷ್ಟ್ರಗಳು ಸಮ್ಮತಿಸಲಿವೆಯೇ ಎಂಬುದು ಈ ಸಮಾವೇಶದ ಯಶಸ್ಸನ್ನು ನಿರ್ಧರಿಸಲಿದೆ.
ಅಭಿವೃದ್ಧಿ ಹೊಂದಿದ ಮತ್ತು ಶ್ರೀಮಂತ ರಾಷ್ಟ್ರಗಳು ವಾರ್ಷಿಕ ಸುಮಾರು 1 ಟ್ರಿಲಿಯನ್ ಡಾಲರ್ ನೀಡಬೇಕು ಎಂಬುದು ಈ ಹಿಂದಿನ ಗುರಿಯಾಗಿದ್ದು, ಅದು 2025ನೇ ಸಾಲಿಗೆ ಅಂತ್ಯವಾಗಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ (ಒಇಸಿಡಿ) ಈ ಮೊದಲು ತಿಳಿಸಿತ್ತು.
ಆದರೆ, ಈ ಪೈಕಿ ಹೆಚ್ಚಿನ ಮೊತ್ತವನ್ನು ಅನುದಾನದ ಬದಲಿಗೆ ಸಾಲದ ರೂಪದಲ್ಲಿ ನೀಡಲಿದೆ. ಈ ವ್ಯವಸ್ಥೆ ಬದಲಾಗಬೇಕು ಎಂಬುದು ನೆರವು ಸ್ವೀಕರಿಸಿರುವ ಕೆಲವು ರಾಷ್ಟ್ರಗಳ ಪ್ರತಿಪಾದನೆಯಾಗಿದೆ.
ಸಮಾವೇಶದಲ್ಲಿ ಈ ಕುರಿತ ಚರ್ಚೆಗೆ ತಾಪಮಾನ ಆರ್ಥಿಕ ನೆರವು ಕುರಿತ ಉನ್ನತ ಮಟ್ಟದ ತಜ್ಞರ ಸ್ವತಂತ್ರ ಸಮಿತಿಯ ವರದಿ ಮುನ್ನುಡಿಯಾಯಿತು. ಅಭಿವೃದ್ಧಿ ಹೊಂದಿದ ಮತ್ತು ಶ್ರೀಮಂತ ರಾಷ್ಟ್ರಗಳು ನೀಡಬೇಕಾಗಿರುವ 'ತಾಪಮಾನ ಆರ್ಥಿಕ ನೆರವು'ಅನ್ನು 2035ರ ವರೆಗೂ ವಾರ್ಷಿಕ 1.3 ಟ್ರಿಲಿಯನ್ ಡಾಲರ್‌ಗೆ ಏರಿಸಬೇಕು. ಪಾವತಿ ವಿಳಂಬವಾದರೆ ಈ ಮೊತ್ತವೂ ಏರಬೇಕು ಎಂದು ಈ ವರದಿ ಅಭಿಪ್ರಾಯಪಟ್ಟಿತು.
2030ರ ವೇಳೆಗೆ ಹೂಡಿಕೆಯಾಗುವ ಮೊತ್ತದಲ್ಲಿ ಕೊರತೆಯಾದರೆ ಅದರಿಂದ ನಂತರದ ವರ್ಷಗಳ ಒತ್ತಡ ಹೆಚ್ಚಲಿದೆ. ತಾಪಮಾನ ಸ್ಥಿರತೆ ಗುರಿ ಸಾಧಿಸುವ ಹಾದಿಯು ಇನ್ನಷ್ಟು ಕಠಿಣವಾಗಲಿದೆ ಎಂದು ಎಚ್ಚರಿಸಿತು.
ತಾಪಮಾನ ಬದಲಾವಣೆ ನಿಯಂತ್ರಿಸುವಲ್ಲಿ ಈಗಿನ ಸಾಧನೆ ಕಡಿಮೆ ಆದಷ್ಟೂ, ನಂತರದ ವರ್ಷಗಳಲ್ಲಿ ಈ ಉದ್ದೇಶ ಸಾಧನೆಗೆ ಹೂಡಬೇಕಾದ ಮೊತ್ತವೂ ಏರಿಕೆಯಾಗಲಿದೆ ಎಂದು ವರದಿಯು ಎಚ್ಚರಿಸಿತ್ತು.
ಆರ್ಥಿಕ ನೆರವು ಕುರಿತು ಹೊಸ ಒಪ್ಪಂದ ಏರ್ಪಡುವ ಕುರಿತು ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ತಾಪಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಮಂಡಳಿಯು ಪ್ರಕಟಿಸಿರುವ ವರದಿಯ ಪ್ರಕಾರ, ಸಂಬಂಧಿತ ರಾಷ್ಟ್ರಗಳು ಭಿನ್ನ ನಿಲುವು ಹೊಂದಿದ್ದು, ಸಹಮತ ಮೂಡುವ ಸಾಧ್ಯತೆಗಳಿಲ್ಲ.
ಈ ಮಧ್ಯೆ ಆರ್ಥಿಕವಾಗಿ ಪ್ರಬಲವಾಗಿರುವ 10 ರಾಷ್ಟ್ರಗಳ ಸಮೂಹವು ಈಗಾಗಲೇ 2030ರವರೆಗೆ ತಾಪಮಾನ ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ವಾರ್ಷಿಕ 120 ಬಿಲಿಯನ್ ಡಾಲರ್ ಅನ್ನು ನೀಡಲು ತೀರ್ಮಾನಿಸಿವೆ ಎಂದು ತಿಳಿದುಬಂದಿದೆ. ಇದರಲ್ಲಿ ಖಾಸಗಿ ವಲಯದ 65 ಬಿಲಿಯನ್ ಡಾಲರ್ ಸೇರಿದೆ.
ಹಸಿರು ಇಂಧನ ಗುರಿ ಸಾಧನೆಗೆ ನೆರವು ಅಗತ್ಯ ಎಂದು 'ಬೇಸಿಕ್' ರಾಷ್ಟ್ರಗಳ ಪ್ರತಿಪಾದನೆ ನೆರವು ನೀಡುವುದು ವಿಳಂಬವಾದರೆ ಮೊತ್ತ ಇನ್ನಷ್ಟು ಏರಿಕೆ ಸಿಒಪಿ29 ಸಮಾವೇಶದಲ್ಲಿ ಭಿನ್ನ ನಿಲುವು, ಮೂಡದ ಸಹಮತಬದ್ಧತೆ ಈಡೇರಿಸಿ: ಭಾರತ ಚೀನಾ ಆಗ್ರಹ
ಬಾಕು (ಅಜರ್‌ಬೈಜಾನ್): ಹವಾಮಾನ ಬದಲಾವಣೆಗೆ ಸಂಬಂಧಿತ ಆರ್ಥಿಕ ನೆರವು ನೀಡುವ ತಮ್ಮ ಬದ್ಧತೆಯನ್ನು ಈಡೇರಿಸಬೇಕು ಎಂದು ಶ್ರೀಮಂತ ರಾಷ್ಟ್ರಗಳಿಗೆ ಭಾರತವು ಸೇರಿದಂತೆ 'ಬೇಸಿಕ್' ಶೃಂಗದಲ್ಲಿರುವ ಐದು ರಾಷ್ಟ್ರಗಳು ಒತ್ತಾಯಿಸಿವೆ. ತಾಪಮಾನ ಬದಲಾವಣೆ ಕುರಿತ ಇಲ್ಲಿ ನಡೆಯುತ್ತಿರುವ ವಾರ್ಷಿಕ 'ಸಿಒಪಿ29' ಸಮಾವೇಶದಲ್ಲಿ ಶ್ರೀಮಂತ ರಾಷ್ಟ್ರಗಳು ತಮ್ಮ ಆರ್ಥಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸಿದವು. ಇದನ್ನು 'ಬೇಸಿಕ್' ರಾಷ್ಟ್ರಗಳು ತಿರಸ್ಕರಿಸಿದವು. ಬ್ರೆಜಿಲ್ ದಕ್ಷಿಣ ಅಫ್ರಿಕಾ ಭಾರತ ಹಾಗೂ ಚೀನಾ ಒಳಗೊಂಡ ಗುಂಪನ್ನು 'ಬೇಸಿಕ್' ರಾಷ್ಟ್ರಗಳು ಎನ್ನಲಾಗುತ್ತದೆ. 'ಬೇಸಿಕ್' ಶೃಂಗದಲ್ಲಿ ಭಾರತ ಅಲ್ಲದೆ ಬ್ರೆಜಿಲ್ ದಕ್ಷಿಣ ಆಫ್ರಿಕಾ ಚೀನಾ ರಾಷ್ಟ್ರಗಳಿವೆ. ಕಾನೂನುಬದ್ಧ ಅಂತರರಾಷ್ಟ್ರೀಯ ಒಡಂಬಡಿಕೆಯಾಗಿರುವ 'ಪ್ಯಾರಿಸ್ ಒಪ್ಪಂದದ 2015' ಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಈ ರಾಷ್ಟ್ರಗಳು ಒತ್ತಾಯಿಸಿದವು.
ಪ್ರಮುಖಾಂಶಗಳು
ಕ್ರಿಪ್ಟೊ ಕರೆನ್ಸಿಗಳು ಹಾಗೂ ಪ್ಲಾಸ್ಟಿಕ್ ಮೇಲೆ ತೆರಿಗೆ ವಿಧಿಸುವಂತೆ ಫ್ರಾನ್ಸ್ ಕೆನ್ಯಾ ಹಾಗೂ ಬಾರ್ಬಡೋಸ್ ನೇತೃತ್ವದ ಕಾರ್ಯಪಡೆ ಸಲಹೆ ನೀಡಿದೆ. ಈ ತೆರಿಗೆ ವಿಧಿಸುವ ಮೂಲಕ ವಾರ್ಷಿಕ 25-35 ಶತಕೋಟಿ ಡಾಲರ್ ಸಂಗ್ರಹಿಸಬಹುದು. ಹವಾಮಾನ ಬದಲಾವಣೆ ಪರಿಣಾಮಗಳನ್ನು ಎದುರಿಸುವುದಕ್ಕಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಈ ಹಣ ನೀಡಬಹುದಾಗಿದೆ
ಜಾಗತಿಕ ತಾಪಮಾನ ಏರಿಕೆ ತಡೆಯಲು ಎಲ್ಲ ದೇಶಗಳು ಪ್ರಯತ್ನ ಮುಂದುವರಿಸಿದ್ದರೂ ಸತತ ಮೂರನೇ ವರ್ಷವೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಭೂಮಿಯ ಉಷ್ಣಾಂಶವು ಕೈಗಾರಿಕೀಕರಣ ಅವಧಿಗೂ ಮುಂಚಿನ ಅವಧಿಯಲ್ಲಿದ್ದ ತಾಪಮಾನಕ್ಕಿಂತಲೂ 1.3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಹವಾಮಾನ ಬದಲಾವಣೆ ಕಾರಣಗಳಿಂದ ತಾಪಮಾನವು 2.7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ
ವಾಯುಮಾಲಿನ್ಯವು ಗಡಿ ಸಮಸ್ಯೆಯೂ ಆಗಿದೆ. ಗಡಿ ಉದ್ದಕ್ಕೂ ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಲು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ. ಭೂತಾನ್ ಪ್ರಧಾನಿ ತ್ಸೆರಿಂಗ್ ಟೋಬ್ಗೆ ನೇತೃತ್ವದಲ್ಲಿ ನಡೆದ ಗಡಿ ಹಂಚಿಕೊಳ್ಳುವ 8 ರಾಷ್ಟ್ರಗಳ ಸಭೆಯಲ್ಲಿ ಭಾರತ ಈ ಒತ್ತಾಯ ಮಾಡಿದೆ.