ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ 'ಫೆಂಗಲ್' ಚಂಡಮಾರುತ ರೂಪುಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ನಾಳೆ (ನ. 30) ಫೆಂಗಲ್ ಚಂಡಮಾರುತ ಪುದುಚೇರಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.
ವಾಯುಭಾರ ಕುಸಿತದಿಂದಾಗಿ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತ, ಇಂದು ಗಂಟೆಗೆ 10 ಕಿ.ಮೀ. ವೇಗದಲ್ಲಿ ಉತ್ತರ-ವಾಯವ್ಯದತ್ತ ಚಲಿಸುತ್ತಿದೆ. ನಾಳೆ ಮಧ್ಯಾಹ್ನದ ವೇಳೆಗೆ ಉತ್ತರ ತಮಿಳುನಾಡು, ಕಾರೈಕಲ್ ಮತ್ತು ಮಹಾಬಲಿಪುರ ಮತ್ತು ಪುದುಚೇರಿ ಕರಾವಳಿ ಪ್ರದೇಶಗಳನ್ನು ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಈ ವೇಳೆ ಭಾರಿ ಮಳೆಯಾಗಲಿದೆ.
ಇದರ ಪರಿಣಾಮ ಡಿಸೆಂಬರ್ 2ರಂದು ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ, ಕಾರೈಕಲ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ.
ಡಿಸೆಂಬರ್ 3ರಂದು ಕರ್ನಾಟಕ ಕರಾವಳಿ, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ, ಲಕ್ಷದ್ವೀಪ, ಕಾರೈಕಲ್ ಪ್ರದೇಶಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.