HEALTH TIPS

'ಸೋತಾಗ ಮಾತ್ರ EVM ಟ್ಯಾಂಪರ್ಡ್, ಗೆದ್ದಾಗ ಇಲ್ಲ': ಬ್ಯಾಲೆಟ್ ಪೇಪರ್ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಚುನಾವಣೆಗಳನ್ನು ಮತ್ತೆ ಬ್ಯಾಲೆಟ್ ಪೇಪರ್ ಮತದಾನದ ಮೂಲಕ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಚುನಾವಣೆಯಲ್ಲಿ ಸೋತಾಗ ಮಾತ್ರ ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ) ಟ್ಯಾಂಪರಿಂಗ್ ಆರೋಪಗಳು ಕೇಳಿಬರುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ.ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ವಿಭಾಗೀಯ ಪೀಠ, "ಏನಾಗುತ್ತದೆ ಎಂದರೆ, ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವುದಿಲ್ಲ. ಆದರೆ ನೀವು ಚುನಾವಣೆಯಲ್ಲಿ ಸೋತಾಗ, ಇವಿಎಂಗಳನ್ನು ಟ್ಯಾಂಪರ್ ಮಾಡಲಾಗುತ್ತದೆ ಟೀಕಿಸಿದೆ.

"ನಿಮ್ಮ ಬಳಿ ಆಸಕ್ತಿದಾಯಕ ಪಿಐಎಲ್‌ಗಳಿವೆ. ಈ ಅದ್ಭುತ ವಿಚಾರಗಳನ್ನು ನೀವು ಹೇಗೆ ಪಡೆಯುತ್ತೀರಿ?" ಎಂದು ವಿಭಾಗೀಯ ಪೀಠ ಅರ್ಜಿದಾರ ಕೆಎ ಪೌಲ್ ಅವರನ್ನು ಪ್ರಶ್ನಿಸಿತು.

ಅರ್ಜಿದಾರರು ಮೂರು ಲಕ್ಷಕ್ಕೂ ಹೆಚ್ಚು ಅನಾಥರು ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ನೀವು ಈ ರಾಜಕೀಯ ಕ್ಷೇತ್ರಕ್ಕೆ ಏಕೆ ಬರುತ್ತಿದ್ದೀರಿ? ನಿಮ್ಮ ಕೆಲಸದ ಕ್ಷೇತ್ರವು ತುಂಬಾ ವಿಭಿನ್ನವಾಗಿದೆ" ಎಂದು ಪೀಠ ಪ್ರಶ್ನಿಸಿತು.

ಪೌಲ್ ಅವರು ತಾವು 150 ಕ್ಕೂ ಹೆಚ್ಚು ದೇಶಗಳಿಗೆ ಹೋಗಿರುವುದಾಗಿ ಹೇಳಿದ ನಂತರ, ಪ್ರತಿಯೊಂದು ರಾಷ್ಟ್ರಗಳು ಬ್ಯಾಲೆಟ್ ಪೇಪರ್ ಮತದಾನವನ್ನು ಹೊಂದಿವೆಯೇ ಅಥವಾ ಎಲೆಕ್ಟ್ರಾನಿಕ್ ಮತದಾನವನ್ನು ಬಳಸುತ್ತವೆಯೇ ಎಂದು ಪೀಠ ಪ್ರಶ್ನಿಸಿತು.

ಈ ಹಿಂದೆ ರಾಜಕೀಯ ನಾಯಕರಾದ ಚಂದ್ರಬಾಬು ನಾಯ್ಡು ಸೋತಾಗ ಮತ್ತು ಜಗನ್ ಮೋಹನ್ ರೆಡ್ಡಿ ಇತ್ತೀಚಿನ ಚುನಾವಣೆಗಳಲ್ಲಿ ಸೋತಾಗ ಒಬ್ಬರಿಗೊಬ್ಬರು ಇವಿಎಂ ಗಳನ್ನು ತಿರುಚಬಹುದು ಎಂದ ಆರೋಪ-ಪ್ರತ್ಯರೋಪ ಮಾಡಿದ್ದನ್ನು ಸ್ಮರಿಸಿದ ನ್ಯಾಯಾದೀಶರು, ಅರ್ಜಿದಾರರ ವಾದವನ್ನು ತಳ್ಳಿಹಾಕಿದರು. '

'ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ತಿರುಚಿಲ್ಲ, ಸೋತಾಗ ಇವಿಎಂಗಳನ್ನು ತಿರುಚಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇಂಥ ವಾದ ಮಂಡಿಸಲು ಇದು ಸೂಕ್ತ ಜಾಗ ಅಲ್ಲ'' ಎಂದು ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.

ಬ್ಯಾಲೆಟ್ ಪೇಪರ್ ಮತದಾನದ ಹೊರತಾಗಿ, ಮತದಾನದ ಸಮಯದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರ ವಸ್ತುಗಳನ್ನು ವಿತರಿಸಿದ್ದು ಕಂಡುಬಂದಲ್ಲಿ ಕನಿಷ್ಠ ಐದು ವರ್ಷಗಳವರೆಗೆ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವುದು ಸೇರಿದಂತೆ ಹಲವಾರು ನಿರ್ದೇಶನಗಳನ್ನು ಮನವಿಯಲ್ಲಿ ಕೋರಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries