ಮುಂಬೈ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಾಲಿವುಡ್ ನಟ ಶರದ್ ಕಪೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಶರದ್ ಅವರು ತಮ್ಮ ನಿವಾಸದಲ್ಲಿ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶರದ್ ಕಪೂರ್ ಅವರು ಸಿನಿಮಾ ಚಿತ್ರೀಕರಣದ ಬಗ್ಗೆ ಚರ್ಚಿಸುವ ನೆಪದಲ್ಲಿ ನನ್ನನ್ನು ಮನೆಗೆ ಕರೆಸಿಕೊಂಡಿದ್ದರು. ಆಗ ನನ್ನ ಮೈ-ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದರು. ದೇಹದ ಕೆಲವು ಭಾಗಗಳನ್ನು ಬಲವಂತವಾಗಿ ಮುಟ್ಟಿದರು' ಎಂದು 32 ವರ್ಷದ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆ ಬಳಿಕವೂ ಶರದ್ ಕಪೂರ್ ಅವರು ಮಹಿಳೆಗೆ ವಾಟ್ಸ್‌ಆಯಪ್‌ನಲ್ಲಿ ಅಸಭ್ಯ ಭಾಷೆ ಬಳಸಿ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೇಸ್‌ಬುಕ್ ಮೂಲಕ ಶರದ್ ಕಪೂರ್ ಅವರೊಂದಿಗೆ ಸ್ನೇಹ ಬೆಳೆಸಿದ್ದೆ. ವಿಡಿಯೊ ಕರೆಗಳ ಮೂಲಕ ಅವರೊಂದಿಗೆ ಸಂವಹನ ನಡೆಸಿದ್ದೇನೆ ಎಂದು ಮಹಿಳೆ ವಿವರಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಪೂರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74, 75 , 79ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಾಲಿವುಡ್ ನಟ ಶಾರುಕ್ ಖಾನ್ ಅಭಿನಯದ ಜೋಶ್, ಕಾರ್ಗಿಲ್ ಎಲ್‌ಒಸಿ ಮತ್ತು ಲಕ್ಷ್ಯ ಚಿತ್ರಗಳಲ್ಲಿ ಶರದ್ ಕಪೂರ್ ಕಾಣಿಸಿಕೊಂಡಿದ್ದಾರೆ.