ಶ್ರೀನಗರ: ಇಲ್ಲಿನ ತೀವ್ರ ಜನಸಂದಣಿ ಹೊಂದಿದ ಮಾರುಕಟ್ಟೆಯೊಂದರ ಬಳಿ 'ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ಬಂಕರ್' ಗುರಿಯಾಗಿಸಿ ಭಯೋತ್ಪಾದಕರು ಭಾನುವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ.
ಹೆಚ್ಚು ಭದ್ರತೆ ಹೊಂದಿರುವ ಆಲ್ ಇಂಡಿಯಾ ರೇಡಿಯೊ ಹಾಗೂ ದೂರದರ್ಶನ ಕೇಂದ್ರದ ಪ್ರವಾಸಿ ಸ್ವಾಗತ ಕೇಂದ್ರದ (ಟಿಆರ್‌ಸಿ) ಬಳಿ ಈ ದಾಳಿ ನಡೆದಿದೆ.
'ಸಿಆರ್‌ಪಿಎಫ್ ಬಂಕರ್ ಅನ್ನು ಗುರಿಯಾಗಿಸಿ ಗ್ರೆನೇಡ್ ಎಸೆದಿದ್ದಾರೆ. ಆದರೆ ಗುರಿ ತಪ್ಪಿ ರಸ್ತೆ ಬದಿಗೆ ಬಿದ್ದಿದೆ. ಗಾಯಾಳುಗಳಲ್ಲಿ ಬೀದಿ ವ್ಯಾಪಾರಿಗಳೇ ಹೆಚ್ಚಿದ್ದು, ಇಬ್ಬರು ಮಹಿಳೆಯರು, ನಾಲ್ವರು ಮಕ್ಕಳಿಗೂ ಗಾಯಗಳಾಗಿವೆ. ಕೂಡಲೇ ಅವರನ್ನು ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ಒಬ್ಬರು ಸ್ಥಿತಿ ಚಿಂತಾಜನಕವಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ(ಎಲ್‌ಟಿಇ) ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಉಸ್ಮಾನ್ ಭಾಯಿಯನ್ನು ನವೆಂಬರ್ 2ರಂದು ಸೇನೆಯು ಹತ್ಯೆಗೈದಿತ್ತು. ಇದರಿಂದ ಹತಾಶೆಗೊಂಡು ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ' ಎಂದು ಹೇಳಿದ್ದಾರೆ.
ಪೊಲೀಸರು ಹಾಗೂ ಅರೆಸೇನಾಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಕಳೆದ ಕೆಲವು ದಿನಗಳಿಂದ ಕಣಿವೆ ಭಾಗದ ಕೆಲವು ಕಡೆಗಳಲ್ಲಿ ನಡೆದ ಎನ್‌ಕೌಂಟರ್‌ನಿಂದ ಸುದ್ದಿಯಾಗಿತ್ತು. ಈಗ ಶ್ರೀನಗರದ ಅಮಾಯಕ ಅಂಗಡಿ ಮಾಲೀಕರ ಮೇಲೆ ಗ್ರೆನೇಡ್ ದಾಳಿಯಾಗಿದ್ದು, ತೀವ್ರವಾಗಿ ಆಘಾತಕ್ಕೊಳಗಾಗಿದ್ದೇನೆ. ನಾಗರಿಕರನ್ನು ಗುರಿಯಾಗಿರಿಸಿ ನಡೆದ ದಾಳಿಯು ಸಮರ್ಥನೀಯವಾದುದಲ್ಲ' ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು 'ಎಕ್ಸ್' ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಖಂಡನೆ: ಭಯೋತ್ಪಾದಕರ ದಾಳಿ ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
'ಅಂಗಡಿ ಮಾಲೀಕರ ಮೇಲೆ ದಾಳಿ ನಡೆದಿರುವುದು ದುರೃಷ್ಟಕರವಾಗಿದ್ದು, ತೀವ್ರ ಆಘಾತ ಉಂಟುಮಾಡಿದೆ' ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾರೀಕ್ ಹಮೀದ್ ಕರ‍್ರ ತಿಳಿಸಿದ್ದಾರೆ.
'ಇಂತಹ ಕ್ರೂರ ಹಾಗೂ ಅಮಾನವೀಯ ದಾಳಿ ತಡೆಯುವ ನಿಟ್ಟಿನಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಯಾವುದೇ ಭೀತಿಯಿಂದಲೇ ಮುಕ್ತವಾಗಿ ಓಡಾಡುವಂತಹ ವಾತವರಣ ಸೃಷ್ಟಿಸಬೇಕು' ಎಂದು ಆಗ್ರಹಿಸಿದ್ದಾರೆ.
ಉಗ್ರರ ಸಹಚರರ ಬಂಧನ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ತಹಾಬ್ ಪ್ರದೇಶದ ನಿವಾಸಿ ಸಜಾದ್ ಅಹಮ್ಮದ್ ದರ್‌ನನ್ನು ಭದ್ರತಾ ಪಡೆಗಳು ಭಾನುವಾರ ಬಂಧಿಸಿವೆ.
ಸೇನೆ, ಸಿಆರ್‌ಪಿಎಫ್ ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಪಿಸ್ತೂಲ್, 2 ಜೀವಂತ ಗ್ರೆನೇಡ್, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.