ತಿರುವನಂತಪುರ: ಕೇರಳದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆದ್ದಿದೆ. ಚೇಲಕ್ಕರ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ನೇತ್ರತ್ವದ ಎಲ್‌ಡಿಎಫ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ರಾಹುಲ್ ಮಾಂಕೂಟತ್ತಿಲ್ ಅವರು ಬಿಜೆಪಿಯ ಸಿ. ಕೃಷ್ಣಕುಮಾರ್ ಅವರನ್ನು 18,849 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಚೇಲಕ್ಕರ ವಿಧಾನಸಭಾ ಕ್ಷೇತ್ರದಲ್ಲಿ ಎಲ್‌ಡಿಎಫ್‌ನ ಯು.ಆರ್. ಪ್ರದೀಪ್ 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಆ ಮೂಲಕ ಎಡಪಕ್ಷಗಳ ಭದ್ರಕೋಟೆಯನ್ನು ಉಳಿಸಿಕೊಂಡಿದ್ದಾರೆ.
ವಯನಾಡ್‌ಲೋಕಸಭೆ: ಪ್ರಿಯಾಂಕಾ ಗೆಲುವು
ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ಯುಡಿಎಫ್‌ನಿಂದ ಸ್ಪರ್ಧಿಸಿದ್ದ ಪ್ರಿಯಾಂಕಾ ಗಾಂಧಿ ಅವರು 4 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಇದು ಅವರ ಚೊಚ್ಚಲ ಚುನಾವಣೆಯಾಗಿದ್ದು, ಅಭೂತಪೂರ್ವ ಗೆಲವು ದಾಖಲಿಸಿದ್ದಾರೆ.