HEALTH TIPS

Maharashtra Election Results Highlights: ಮಹಾಯುತಿ ಕೂಟಕ್ಕೆ ಭಾರಿ ಮುನ್ನಡೆ

ವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು (ಶನಿವಾರ) ನಡೆಯುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಎದುರಿಸಿದ ಆಘಾತದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಚೇತರಿಸಿಕೊಳ್ಳಲಿದೆಯೇ ಅಥವಾ ಕಾಂಗ್ರೆಸ್‌ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲಿದೆಯೇ ಎಂಬುದು ಈ ಫಲಿತಾಂಶದಿಂದ ಗೊತ್ತಾಗಲಿದೆ.

ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭವಾಗಿದ್ದು, ಯಾವ ಪಾಳಯ ಸರಳ ಬಹುಮತದತ್ತ ಸಾಗುತ್ತಿದೆ ಎಂಬುದು ಮಧ್ಯಾಹ್ನದ ವೇಳೆಗೆ ಬಹುತೇಕ ನಿಚ್ಚಳವಾಗಲಿದೆ.

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಬುಧವಾರದಂದು (ನ.20) ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

ಮಹಾರಾಷ್ಟ್ರದಲ್ಲಿ 'ಮಹಾಯುತಿ' ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು ಗದ್ದುಗೆ ಏರಲಿದೆ ಎಂದು ಎರಡು ಸಮೀಕ್ಷೆಗಳು ತಿಳಿಸಿವೆ.

ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಹೈಲೈಟ್ಸ್...

  • ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟ ಆರಂಭಿಕ ಹಂತದಲ್ಲಿ 224 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು 53 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

  • ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಬಿಜೆಪಿ ನೇತೃತ್ವದ ಮಹಾಯುತಿಯು ಅಧಿಕಾರ ಹಿಡಿಯಲು ಅಗತ್ಯವಿರುವ ಮ್ಯಾಜಿಕ್‌ ಸಂಖ್ಯೆಯನ್ನು ದಾಟಿದೆ.

  • 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಧಿಕಾರಕ್ಕೆ 145 ಶಾಸಕರ ಅಗತ್ಯವಿದೆ.

  • ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಮಗ ಜೀಶನ್ ಸಿದ್ದೀಕಿ ಬಾಂದ್ರಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

  • ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ, ಮಹಾವಿಕಾಸ ಅಘಾಡಿ (ಎಂವಿಎ)ಯು ಬಿಜೆಪಿ ನೇತೃತ್ವದ 'ಮಹಾಯುತಿ' ಯನ್ನು ಅಧಿಕಾರದಿಂದ ಕೆಳಗಿಳಿಸುವ ಉಮೇದು ಹೊಂದಿದೆ. ಆದರೆ, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮಹಾಯುತಿಗೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.

  • ಫಲಿತಾಂಶ ಯಾವ ಮೈತ್ರಿಕೂಟದ ಪರವಾಗಿ ಬಂದರೂ, ಅಂತಿಮವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದೇ ಕುತೂಹಲದ ವಿಷಯ.

  • ಜನಾದೇಶ ತಮ್ಮ ಪರವಾಗಿಯೇ ಇರಲಿದೆ ಎಂದು ಎನ್‌ಡಿಎ ಹಾಗೂ 'ಇಂಡಿಯಾ' ಒಕ್ಕೂಟ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದ ಮೇಲೂ ಈ ಫಲಿತಾಂಶವು ಪ್ರಭಾವ ಬೀರುವ ನಿರೀಕ್ಷೆ ಇದೆ.

  • ಮಹಾ ವಿಕಾಸ ಅಘಾಡಿ ಮೈತ್ರಿಯಲ್ಲಿ ಕಾಂಗ್ರೆಸ್ 101, ಶಿವಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 85 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮತ್ತೊಂದೆಡೆ ಮಹಾಯುತಿ ಮೈತ್ರಿಯ ಪೈಕಿ ಬಿಜೆಪಿ 149, ಶಿವಸೇನಾ 81, ಎನ್‌ಸಿಪಿ (ಅಜಿತ್ ಪವಾರ್ ಬಣ) 59 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

  • ಮಹಾರಾಷ್ಟ್ರದಲ್ಲಿ ಕಳೆದ ಬಾರಿ (2019ರಲ್ಲಿ) ನಡೆದಿದ್ದ ವಿಧಾನಸಭಾ ಚುನಾವಣೆಗೂ ಈಗ ನಡೆಯುತ್ತಿರುವ ಚುನಾವಣೆಗೂ ಭಾರಿ ವ್ಯತ್ಯಾಸವಿದೆ. ಕಳೆದ ಚುನಾವಣೆಯ ವೇಳೆ ರಾಜ್ಯದ ಮುಖ್ಯ ಪಕ್ಷಗಳಾದ ಶಿವಸೇನಾ ಮತ್ತು ಎನ್‌ಸಿಪಿ ವಿಭಜನೆಗೊಂಡಿರಲಿಲ್ಲ. ಶಿವಸೇನಾದಿಂದ ಏಕನಾಥ್ ಶಿಂದೆ, ಎನ್‌ಸಿಪಿಯಿಂದ ಅಜಿತ್ ಪವಾರ್ ಹೊರಹೋಗಿ ಪಕ್ಷಗಳನ್ನು ಒಡೆದು, ಬಿಜೆಪಿ ಜತೆ ಸೇರಿ 'ಮಹಾಯುತಿ' ಹುಟ್ಟುಹಾಕಿ ಅಧಿಕಾರದ ಗದ್ದುಗೆಯನ್ನೂ ಹಿಡಿದದ್ದು ರಾಷ್ಟ್ರ ಮಟ್ಟದಲ್ಲಿಯೂ ಭಾರಿ ಸದ್ದು ಮಾಡಿತ್ತು. ಮೂಲ ಪಕ್ಷ ಯಾವುದು ಎನ್ನುವುದು ನ್ಯಾಯಾಲಯದ ಅಂಗಳದಲ್ಲಿ ನಿರ್ಣಯವಾಗಬೇಕಾಯಿತು. ಅದರ ಸೈದ್ಧಾಂತಿಕ ಮತ್ತು ನೈತಿಕ ಆಯಾಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.

  • ಆರು ತಿಂಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಸ್ಥಾನಗಳ ಪೈಕಿ ಮಹಾಯುತಿ 17 ಮತ್ತು ಎಂವಿಎ 31 ಸ್ಥಾನ ಗಳಿಸಿದ್ದವು. ಅದರಿಂದ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಶರದ್ ಪವಾರ ನೇತೃತ್ವದ ಎನ್‌ಸಿಪಿ ಒಂದಿಷ್ಟು ಹುರುಪಿನಿಂದ ಇದ್ದವು. ಆದರೆ, ಹರಿಯಾಣದಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಮೂರನೇ ಬಾರಿ ಅಧಿಕಾರ ಹಿಡಿದಿರುವುದು ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ ಆಘಾಡಿಗೆ (ಎಂವಿಎ) ಎಚ್ಚರಿಕೆಯ ಸಂದೇಶ ರವಾನಿಸಿದೆ.

  • ಮಹಾಯುತಿ ಮತ್ತು ಮಹಾವಿಕಾಸ ಆಘಾಡಿ (ಎಂವಿಎ) ಎರಡೂ ಮೈತ್ರಿಕೂಟಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗಿತ್ತು. ಸಮಯ ಸಿಕ್ಕಿದಾಗಲೆಲ್ಲ ಕುಟುಂಬ ರಾಜಕಾರಣದ ವಿರುದ್ಧ ತೀವ್ರ ಟೀಕೆ ಮಾಡುತ್ತಿದ್ದ ಬಿಜೆಪಿಯಿಂದ ಹಿಡಿದು ಕಾಂಗ್ರೆಸ್, ಶಿವಸೇನಾ ಮತ್ತು ಎನ್‌ಸಿಪಿಯ ಎರಡೂ ಬಣಗಳಲ್ಲಿಯೂ ಹಾಲಿ/ಮಾಜಿ ಸಚಿವರು, ಶಾಸಕರು/ಸಂಸದರ ಕುಟುಂಬದವರು, ಹತ್ತಿರದ ಬಂಧುಗಳನ್ನು ಕಣಕ್ಕಿಳಿಸಲಾಗಿತ್ತು. ಮಹಾಯುತಿ ಮತ್ತು ಎಂವಿಎ ಎರಡೂ ಮೈತ್ರಿಕೂಟಗಳಲ್ಲಿ ರಾಜಕೀಯ ಕುಟುಂಬಗಳಿಗೆ ಸೇರಿದ ನೂರಕ್ಕೂ ಹೆಚ್ಚು ಮಂದಿಗೆ ಟಿಕೆಟ್ ನೀಡಲಾಗಿತ್ತು.

  • ಬಾರಾಮತಿ ಕ್ಷೇತ್ರದಲ್ಲಿ ಪವಾರ್ ಸಂಬಂಧಿಗಳಲ್ಲೇ ಜಿದ್ದಾಜಿದ್ದಿ ಏರ್ಪಟ್ಟಿದೆ. ಎನ್‌ಸಿಪಿ ಮುಖಂಡ ಅಜಿತ್ ಪವಾರ್ ವಿರುದ್ಧ ಅವರ ಸಹೋದರ ಶ್ರೀನಿವಾಸ ಪವಾರ್ ಮಗ ಯುಗೇಂದ್ರ ಪವಾರ್ ಅವರನ್ನು ಎನ್‌ಸಿಪಿ (ಶರದ್‌ ಪವಾರ್ ಬಣ) ಕಣಕ್ಕಿಳಿಸಿದೆ.

  • 2024ರ ಲೋಕಸಭಾ ಚುನಾವಣೆಯಲ್ಲಿ ಆದಂತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಜಾತಿ ವಿವಾದಗಳು ಪ್ರಭಾವ ಬೀರಲಿವೆ ಎನ್ನಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಮರಾಠ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮನೋಜ್ ಜಾರಂಗೆ ಮತ್ತು ಒಬಿಸಿ ಸಂಘಟನಾ ಸೇನಾ ಸಂಸ್ಥಾಪಕ ಲಕ್ಷ್ಮಣ್ ಹಾಕೆ ತಮ್ಮ ಬೇಡಿಕೆಗಳನ್ನು ಪಕ್ಷಗಳ ಮುಂದೆ ಮಂಡಿಸಿದ್ದರು.

  • ದೇವೇಂದ್ರ ಫಡಣವೀಸ್ ಅವರು ಮರಾಠರಿಗೆ ಮೀಸಲಾತಿ ತಡೆದಿದ್ದಾರೆ ಎಂದು ಬಹಿರಂಗವಾಗಿ ದೂರುತ್ತಿದ್ದರು. ದಲಿತ, ಮುಸ್ಲಿಂ, ಹಿಂದುಳಿದವರೆಲ್ಲರೂ ಒಂದಾಗಬೇಕು ಎಂದು ಅವರು ಕರೆ ನೀಡಿದ್ದರು. ಮರಾಠವಾಡದಲ್ಲಿ ಮರಾಠರು ಮತ್ತು ಒಬಿಸಿಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಇದು ಎಂವಿಎಗಿಂತ ಮಹಾಯುತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

  • ಮರಾಠರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಜಾರಂಗೆ ಅವರು ಘೋಷಿಸಿದ್ದಾರೆ. ಹಾಗೇನಾದರೂ ಆದರೆ ಮತ ವಿಭಜನೆಯಾಗಿ ತಮಗೆ ಅನುಕೂಲವಾಗಲಿದೆ ಎನ್ನುವುದು ಮಹಾಯುತಿ ಲೆಕ್ಕಾಚಾರ.

  • ಮಹಾವಿಕಾಸ ಆಘಾಡಿ (ಎಂವಿಎ)ಗೆ ಮರಾಠರೇ ಬಲ. ಹಾಗಾಗಿ, ಮರಾಠರನ್ನು ಬಿಟ್ಟು ಇತರ ಸಮುದಾಯಗಳತ್ತ ಗಮನ ಕೇಂದ್ರೀಕರಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಮಹಾಯುತಿ ಲೆಕ್ಕಾಚಾರ. ಹರಿಯಾಣದಲ್ಲಿ ಜಾಟರನ್ನು ನೆಚ್ಚಿಕೊಂಡಿದ್ದ ಕಾಂಗ್ರೆಸ್ ವಿರುದ್ಧ ಇತರ ಒಬಿಸಿ ಮತಗಳ ನೆರವಿನಿಂದ ಬಿಜೆ‍ಪಿ ಗೆದ್ದಿತ್ತು. ಅದೇ ಸೂತ್ರವನ್ನು ಮಹಾರಾಷ್ಟ್ರದಲ್ಲಿಯೂ ಅನ್ವಯಿಸಲು ಮಹಾಯುತಿ ಹೊರಟಿದೆ. ಎಂವಿಎ ದಲಿತ, ಮುಸ್ಲಿಂ, ಕುಣಬಿ (ಮರಾಠ ಉಪಪಂಗಡ) ಸಮುದಾಯಗಳನ್ನು ನೆಚ್ಚಿಕೊಂಡಿದ್ದರೆ, ಮಹಾಯುತಿ ಮಾಲಿ, ಧನಗಾರ, ವಂಜಾರಿ ಮುಂತಾದ ಒಬಿಸಿ ಮತಗಳನ್ನು ನೆಚ್ಚಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries