ಇಂಫಾಲ/ನವದೆಹಲಿ: ಮಣಿಪುರದಲ್ಲಿ ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿ ಮೈತೇಯಿ ಸಮುದಾಯದ ಗುಂಪೊಂದು ಸೋಮವಾರ ಬೀದಿಗೆ ಇಳಿದು, ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಹಲವು ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದಿದೆ.
ಜಿರೀಬಾಮ್‌ನಲ್ಲಿ ಈಚೆಗೆ ನಡೆದ ಕೆಲವು ಹತ್ಯೆಗಳನ್ನು ವಿರೋಧಿಸಿ ಮೈತೇಯಿ ಸಮುದಾಯದವರು ಈ ಬಗೆಯಲ್ಲಿ ಪ್ರತಿಭಟಿಸಿದ್ದಾರೆ.
ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕಾರಣ ಅಲ್ಲಿಗೆ ಹೆಚ್ಚುವರಿಯಾಗಿ ಒಟ್ಟು 5,000ಕ್ಕೂ ಹೆಚ್ಚು ಸಿಬ್ಬಂದಿ ಇರುವ 50 ಸಿಎಪಿಎಫ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ಕಂಪನಿಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ ಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಸಚಿವರು ಹಾಗೂ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಶಾಸಕರ ಜೊತೆ ತುರ್ತು ಸಭೆ ನಡೆಸಿ, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಹಿಂಸಾಚಾರ ಶುರುವಾಗಿ, ಅದು ಇತರ ಕಡೆಗಳಿಗೂ ಹರಡಿದ ನಂತರ ಕೇಂದ್ರ ಗೃಹ ಸಚಿವಾಲಯವು 20 ಸಿಎಪಿಎಫ್ ಕಂಪನಿಗಳನ್ನು (ಸಿಆರ್‌ಪಿಎಫ್‌ನ 15 ಹಾಗೂ ಬಿಎಸ್‌ಎಫ್‌ನ ಐದು) ರವಾನಿಸಿತ್ತು.
ಈಗ ಹೆಚ್ಚುವರಿಯಾಗಿ 50 ಕಂಪನಿಗಳು ಈ ವಾರಾಂತ್ಯದೊಳಗೆ ಮಣಿಪುರ ತಲುಪಲಿವೆ. 35 ಕಂಪನಿಗಳನ್ನು ಸಿಆರ್‌ಪಿಎಫ್‌ನಿಂದ, ಇನ್ನುಳಿದ ಕಂಪನಿಗಳನ್ನು ಬಿಎಸ್‌ಎಫ್‌ನಿಂದ ಕಳುಹಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಸಿಆರ್‌ಪಿಎಫ್‌ನ ಮಹಾನಿರ್ದೇಶಕ ಎ.ಡಿ. ಸಿಂಗ್ ಮತ್ತು ಸಿಎಪಿಎಫ್‌ನ ಹಿರಿಯ ಅಧಿಕಾರಿಗಳು ಮಣಿಪುರದಲ್ಲಿ ಬೀಡುಬಿಟ್ಟಿದ್ದಾರೆ. ಕಳೆದ ವಾರದ ನಿಯೋಜನೆಯನ್ನು ಪರಿಗಣಿಸಿದರೆ ಮಣಿಪುರ ರಾಜ್ಯದಲ್ಲಿ ಈಗಾಗಲೇ 218 ಸಿಎಪಿಎಫ್ ಕಂಪನಿಗಳು ಇವೆ.
ಎನ್‌ಐಎ ತನಿಖೆ: ಮಣಿಪುರದಲ್ಲಿ ಈಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಮೂರು ಪ್ರಕರಣಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣಗಳನ್ನು ಎನ್‌ಐಎ ನವೆಂಬರ್ 13ರಂದು ದಾಖಲು ಮಾಡಿಕೊಂಡಿದೆ, ತನಿಖೆ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ.
ಜಿರೀಬಾಮ್‌ನಲ್ಲಿ ಶಸ್ತ್ರಸಜ್ಜಿತರಾಗಿದ್ದ ಉಗ್ರಗಾಮಿಗಳು ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ ಪ್ರಕರಣ, ಶಸ್ತ್ರಸಜ್ಜಿತ ಉಗ್ರರು ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಹಾಗೂ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿದ ಪ್ರಕರಣ, ಬೊರೊಬೆಕ್ರಾದಲ್ಲಿ ಮನೆಗಳನ್ನು ಸುಟ್ಟುಹಾಕಿದ್ದು ಹಾಗೂ ನಾಗರಿಕರ ಹತ್ಯೆ ಮಾಡಿದ ಪ್ರಕರಣ ಕುರಿತು ಎನ್‌ಐಎ ತನಿಖೆ ಆರಂಭಿಸಿದೆ.
ನುಗ್ಗಿದ ಮೈತೇಯಿ ಜನ: ಮೈತೇಯಿ ಸಮುದಾಯದ ಪ್ರಬಲ ಸಂಘಟನೆಯಾಗಿರುವ 'ಮಣಿಪುರ ಏಕತಾ ಸಮನ್ವಯ ಸಮಿತಿ'ಯ ಸದಸ್ಯರು ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ನುಗ್ಗಿ, ಅದರ ಬಾಗಿಲಿಗೆ ಸರಪಳಿ ಬಿಗಿದರು.
ಈ ಕಚೇರಿಯಿಂದ ಅನತಿ ದೂರದಲ್ಲಿ ಇರುವ ಜೀವಸಂಪನ್ಮೂಲ ಮತ್ತು ಸುಸ್ಥಿರ ಅಭಿವೃದ್ಧಿ ಸಂಸ್ಥೆಯ (ಐಬಿಎಸ್‌ಡಿ) ಕಚೇರಿಯ ಹಾಗೂ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ನಿರ್ದೇಶನಾಲಯದ ಕಚೇರಿಗಳ ಮುಖ್ಯ ದ್ವಾರಗಳಿಗೆ ಕೂಡ ಪ್ರತಿಭಟನಕಾರರು ಬೀಗ ಜಡಿದರು.
ಕೇಂದ್ರ ಸರ್ಕಾರವು ಉಗ್ರರ ದಾಳಿಗಳಿಂದ ಜನರನ್ನು ರಕ್ಷಿಸಲು ವಿಫಲವಾಗಿರುವ ಕಾರಣ ಸರ್ಕಾರಿ ಕಚೇರಿಗಳ ಬಾಗಿಲು ಮುಚ್ಚಿಸುವುದಾಗಿ ಸಂಘಟನೆಯು ಈ ಮೊದಲೇ ಘೋಷಿಸಿತ್ತು.
ಈ ನಡುವೆ ಬರಾಕ್ ನದಿಯಲ್ಲಿ ಮಹಿಳೆಯೊಬ್ಬಳ ಶವ ದೊರೆತಿದೆ ಎಂದು ಅಸ್ಸಾಂ ಪೊಲೀಸ್ ಮೂಲಗಳು ಹೇಳಿವೆ. 'ಈ ಶವವು ನಾಪತ್ತೆಯಾದ ಆರು ಮಂದಿ ಪೈಕಿ ಕಡೆಯ ವ್ಯಕ್ತಿಯ ಶವ ಆಗಿರಬಹುದು ಎನ್ನಲಾಗಿದೆ. ಮಣಿಪುರ ಪೊಲೀಸರು ಇದನ್ನು ಖಚಿತಪಡಿಸಬೇಕು' ಎಂದು ಅವರು ಹೇಳಿದ್ದಾರೆ.
ಆರ್‌ಎಸ್‌ಎಸ್ ಖಂಡನೆ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಂಘರ್ಷವನ್ನು ಪ್ರಾಮಾಣಿಕವಾಗಿ ಬಗೆಹರಿಸಬೇಕು ಎಂದು ಹೇಳಿದೆ.
ಸಂಘರ್ಷಕ್ಕೆ ಓರ್ವ ಸಾವು
ಇಂಫಾಲ: ಹಿಂಸಾಗ್ರಸ್ತ ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಆಸ್ತಿಗಳನ್ನು ಧ್ವಂಸಗೊಳಿಸುತ್ತಿದ್ದ ಉದ್ರಿಕ್ತರ ಗುಂಪು ಹಾಗೂ ಭದ್ರತಾ ಪಡೆಗಳ ನಡುವೆ ಸಂಘರ್ಷ ಉಂಟಾಗಿದೆ. ಸಂಘರ್ಷದ ವೇಳೆ ಗುಂಡು ಹಾರಿಸಿದಾಗ ಪ್ರತಿಭಟನೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆದರೆ ಮೊದಲು ಗುಂಡು ಹಾರಿಸಿದ್ದು ಯಾರು ಎಂಬುದು ಸ್ಪಷ್ಟವಾಗಿಲ್ಲ. ಭದ್ರತಾ ಪಡೆಗಳ ಕಡೆಯಿಂದ ಗುಂಡು ಹಾರಿದೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಉಗ್ರರು ಅಪಹರಿಸಿದ್ದ ಮಹಿಳೆಯರು ಹಾಗೂ ಮಕ್ಕಳನ್ನು ಹತ್ಯೆ ಮಾಡಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉದ್ರಿಕ್ತರು ಜಿರೀಬಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಸ್ತಿಗಳನ್ನು ಧ್ವಂಸಗೊಳಿಸುತ್ತಿದ್ದರು. ಆಗ ಈ ಘರ್ಷಣೆ ನಡೆದಿದೆ. 20 ಹರೆಯದ ಈ ಮೃತ ವ್ಯಕ್ತಿಯ ಹೆಸರು ಕೆ. ಅತೌಬಾ ಎಂದು ಗುರುತಿಸಲಾಗಿದೆ. ಇಂಫಾಲ ಕಣಿವೆಯಲ್ಲಿ ಮೌನ ಮನೆಮಾಡಿದೆ. ಇಲ್ಲಿ ಕರ್ಫ್ಯೂ ಮುಂದುವರಿದಿದೆ. ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಇನ್ನೂ ಹಿಂಪಡೆದಿಲ್ಲ.
ಪ್ರಧಾನಿ ಭೇಟಿಗೆ ಕಾಂಗ್ರೆಸ್ ಒತ್ತಾಯ
ನವದೆಹಲಿ (ಪಿಟಿಐ): ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಅಧಿವೇಶನ ಶುರುವಾಗುವ ಮೊದಲು ಭೇಟಿ ನೀಡಬೇಕು ಅಮಿತ್ ಶಾ ಅವರು 'ಅಲ್ಲಿನ ಡಬಲ್ ಎಂಜಿನ್ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಹೊಣೆ ಹೊತ್ತು' ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಪ್ರಧಾನಿಯವರು ಮಣಿಪುರದ ಸರ್ವಪಕ್ಷ ನಿಯೋಗವನ್ನು ಮೊದಲು ಭೇಟಿ ಮಾಡಬೇಕು. ಸಂಸತ್ತಿನ ಅಧಿವೇಶನಕ್ಕೂ ಮೊದಲು ರಾಷ್ಟ್ರ ಮಟ್ಟದಲ್ಲಿ ಸರ್ವಪಕ್ಷ ಸಭೆಯೊಂದನ್ನು ಆಯೋಜಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸೋಮವಾರ ಆಗ್ರಹಿಸಿದ್ದಾರೆ. ಶಾ ಅವರು ಮಾತ್ರವೇ ಅಲ್ಲದೆ ಎನ್. ಬಿರೇನ್ ಸಿಂಗ್ ಅವರು ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯ ಮಾಡಿದ್ದಾರೆ. 'ಮುಖ್ಯಮಂತ್ರಿಯ ವೈಫಲ್ಯಗಳನ್ನು ಗೃಹ ಸಚಿವರು ಏಕೆ ಗಮನಿಸಿಲ್ಲ? ಮುಖ್ಯಮಂತ್ರಿಯನ್ನು ಉಳಿಸಲು ಅವರು ಏಕೆ ಯತ್ನಿಸುತ್ತಿದ್ದಾರೆ' ಎಂದು ಪ್ರಶ್ನಿಸಿದ್ದಾರೆ. ಮಣಿಪುರದಲ್ಲಿ ಡಬಲ್ ಎಂಜಿನ್ ಸರ್ಕಾರದ ಆಳ್ವಿಕೆಯಲ್ಲಿ ಸಂಪೂರ್ಣ ಅರಾಜಕತೆ ಇದೆ ಎಂದು ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೆ. ಮೇಘಚಂದ್ರ ಸಿಂಗ್ ದೂರಿದ್ದಾರೆ.
ಸತತ ಎರಡನೆಯ ದಿನವೂ ಸಭೆ ನಡೆಸಿದ ಶಾ
ನವದೆಹಲಿ: ಮಣಿಪುರದ ಭದ್ರತಾ ವ್ಯವಸ್ಥೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಪರಿಶೀಲನೆ ನಡೆಸಿದರು. ಅಲ್ಲದೆ ಮಣಿಪುರದಲ್ಲಿ ಕೇಂದ್ರದ ಪಡೆಗಳನ್ನು ನಿಯೋಜಿಸುವ ಬಗ್ಗೆಯೂ ಅವರು ಪರಿಶೀಲನೆ ನಡೆಸಿದರು. ಅಮಿತ್ ಶಾ ಅವರು ಸತತ ಎರಡನೆಯ ದಿನವೂ ಮಣಿಪುರ ಸ್ಥಿತಿ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಯ ಮರುಸ್ಥಾಪನೆ ಆದಷ್ಟು ಬೇಗ ಆಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಕೇಂದ್ರ ಗೃಹ ಸಚಿವರು ನಡೆಸಿದ ಸಭೆಯಲ್ಲಿ ಕೇಂದ್ರ ಹಾಗೂ ಮಣಿಪುರ ಸರ್ಕಾರದ ಹಿರಿಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು.