ನವದೆಹಲಿ: ಜನವರಿ 11-12 ರಂದು ದೆಹಲಿಯ ಭಾರತ್ ಮಂಟಪದಲ್ಲಿ 'ವಿಕಸಿತ ಭಾರತ ಯುವ ನಾಯಕರ ಸಂವಾದ' ನಡೆಯಲಿದೆ. ಇದು ರಾಜಕೀಯ ಕುಟುಂಬ ಹಿನ್ನೆಲೆ ಇಲ್ಲದ ಒಂದು ಲಕ್ಷ ಯುವಕರನ್ನು ರಾಜಕೀಯಕ್ಕೆ ಬರುವಂತೆ ಮಾಡುವ ಪ್ರಯತ್ನದ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
116ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜಯಂತಿಯನ್ನು ಬಹಳ ವಿಶೇಷವಾಗಿ ಆಚರಿಸಲಾಗುವುದು ಎಂದರು.
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ)ಅನ್ನು ಶ್ಲಾಘಿಸಿದ ಅವರು, 'ಎನ್‌ಸಿಸಿ ಮತ್ತು ಅದರ ಹೆಸರು ನನ್ನ ಶಾಲಾ ಮತ್ತು ಕಾಲೇಜು ದಿನಗಳನ್ನು ನೆನಪಿಸುತ್ತದೆ. ನಾನೂ ಎನ್‌ಸಿಸಿ ಕೆಡೆಟ್ ಆಗಿದ್ದು, ಅದರಿಂದ ಪಡೆದ ಅನುಭವ ನನಗೆ ಅತ್ಯಮೂಲ್ಯ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ, ಯುವಜನರಲ್ಲಿ ಶಿಸ್ತು, ನಾಯಕತ್ವ ಹಾಗೂ ಸೇವಾ ಮನೋಭಾವನೆಯನ್ನು ಎನ್‌ಸಿಸಿ ತುಂಬುತ್ತದೆ' ಎಂದರು.
ಗುಬ್ಬಚ್ಚಿಗಳ ಸಂತತಿಯನ್ನು ಉಳಿಸಿಕೊಳ್ಳುವ ಬಗ್ಗೆ ವಿವರಿಸಿದ ಅವರು, 'ನಮ್ಮ ಸುತ್ತಮುತ್ತಲಿನ ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಗುಬ್ಬಚ್ಚಿಗಳು ಪ್ರಮುಖ ಪಾತ್ರವಹಿಸುತ್ತವೆ, ಆದರೆ ಇಂದು ನಗರಗಳಲ್ಲಿ ಗುಬ್ಬಚ್ಚಿಗಳು ವಿರಳವಾಗಿ ಕಂಡುಬರುತ್ತವೆ, ಹೆಚ್ಚುತ್ತಿರುವ ನಗರೀಕರಣದಿಂದ, ಗುಬ್ಬಚ್ಚಿಗಳು ನಮ್ಮಿಂದ ದೂರ ಹೋಗಿವೆ. ಇಂದಿನ ಪೀಳಿಗೆಯ ಅನೇಕ ಮಕ್ಕಳು ಗುಬ್ಬಚ್ಚಿಗಳನ್ನು ಚಿತ್ರಗಳಲ್ಲಿ ಅಥವಾ ವಿಡಿಯೊಗಳಲ್ಲಿ ಮಾತ್ರ ನೋಡಿದ್ದಾರೆ. ಅಂತಹ ಮಕ್ಕಳ ಜೀವನದಲ್ಲಿ ಈ ಸುಂದರ ಪಕ್ಷಿಯನ್ನು ಮರಳಿ ತರಲು ಕೆಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗುಬ್ಬಚ್ಚಿಗಳ ಸಂತತಿಯನ್ನು ಹೆಚ್ಚಿಸುವ ಅಭಿಯಾನದಲ್ಲಿ ಚೆನ್ನೈನ ಕುಡುಗಲ್ ಟ್ರಸ್ಟ್ ಮಕ್ಕಳಿಗೆ ಗುಬ್ಬಚ್ಚಿಗಳ ಗೂಡುಗಳನ್ನು ತಯಾರಿಸುವ ತರಬೇತಿಯನ್ನು ನೀಡುತ್ತಿದೆ' ಎಂದರು.
ಸ್ಲೋವಾಕಿಯಾದಲ್ಲಿ ಭಾರತದ ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಮೊದಲ ಬಾರಿ ಉಪನಿಷತ್ ಅನ್ನು ಸ್ಲೋವಾಕ್ ಭಾಷೆಗೆ ಭಾಷಾಂತರಿಸಲಾಗಿದೆ. ಇಂತಹ ಪ್ರಯತ್ನಗಳು ಭಾರತೀಯ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವುದನ್ನು ತೋರಿಸುತ್ತದೆ, ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೋದಿ ಪ್ರಸ್ತಾಪಿಸಿದ ಇತರ ವಿಷಯಗಳು
ಜಾಗತಿಕವಾಗಿ ತಮ್ಮ ಛಾಪು ಮೂಡಿಸಿದ, ಸ್ವಾತಂತ್ರ್ಯ ಹೋರಾಟಗಳಿಗೆ ಕೊಡುಗೆ ನೀಡಿದ ಮತ್ತು ಭಾರತೀಯ ಪರಂಪರೆಯನ್ನು ಸಂರಕ್ಷಿಸಿದ ಅನಿವಾಸಿ ಭಾರತೀಯರ ಬಗ್ಗೆ 'Indian Diaspora Stories' ಎಂಬ ಹ್ಯಾಶ್‌ಟ್ಯಾಗ್ ಬಳಸಿ NaMo ಆಯಪ್ ಅಥವಾ MyGov ನಲ್ಲಿ ಹಂಚಿಕೊಳ್ಳಿ ಎಂದು ಜನರಿಗೆ ಕರೆ ನೀಡಿದರು.
ಹಿರಿಯರಿಗೆ ಸಹಾಯ ಮಾಡುವ ಯುವಜನರ ಶಕ್ತಿಯ ಬಗ್ಗೆ ಉಲ್ಲೇಖಿಸಿದ ಅವರು, ಲಖನೌನ ಯುವಕನೊಬ್ಬ ಆನ್‌ಲೈನ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿ ವೃದ್ಧರಿಗೆ ಪಿಂಚಣಿ ಬರುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಅದೇ ರೀತಿ, ಅಹಮದಾಬಾದ್‌ನ ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ಬಗ್ಗೆ ಹಿರಿಯರಿಗೆ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.