ನವದೆಹಲಿ: ಪೂರ್ವ ಲಡಾಖ್‌ನ ಎರಡನೇ ಘರ್ಷಣೆ ಬಿಂದುವಾದ ಡೆಪ್ಸಾಂಗ್‌ನಲ್ಲಿ ಭಾರತೀಯ ಸೇನೆಯು ಪರಿಶೀಲನಾ ಗಸ್ತು ತಿರುಗುವ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಸರ್ಕಾರ ಶನಿವಾರ ತಿಳಿಸಿದೆ.
ಪೂರ್ವ ಲಡಾಖ್‌ನ ಎರಡು ಘರ್ಷಣೆ ಬಿಂದುಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಸೇನೆ ವಾಪಸ್ ಪಡೆದ ಒಂದು ದಿನದ ನಂತರ ಶುಕ್ರವಾರ ಡೆಮ್ ಚೋಕ್‌ನಲ್ಲಿ ಭಾರತೀಯ ಸೇನೆ ಗಸ್ತು ತಿರುಗುವಿಕೆ ಕಾರ್ಯ ಪ್ರಾರಂಭಿಸಿತ್ತು.
ಸುದ್ದಿಗೋಷ್ಠಿಯಲ್ಲಿಂದು ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಚೀನಾದೊಂದಿಗಿನ ಒಪ್ಪಂದದ ನಂತರ, ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಎರಡರಲ್ಲೂ ಪರಸ್ಪರ ಒಪ್ಪಿಗೆಯ ನಿಯಮಗಳ ಮೇಲೆ ಪರಿಶೀಲನಾ ಗಸ್ತು ಪ್ರಾರಂಭವಾಗಿದೆ ಎಂದು ಹೇಳಿದರು.
ಗುರುವಾರ ದೀಪಾವಳಿಯ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹಲವಾರು ಗಡಿ ಬಿಂದುಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದರು. ಎರಡೂ ದೇಶಗಳು ಘರ್ಷಣೆ ಬಿಂದುಗಳಲ್ಲಿ ಸೇನೆ ಹಿಂಪಡೆಯುವಿಕೆಯನ್ನು ಪೂರ್ಣಗೊಳಿಸಿದ ನಂತರ ಸಾಂಪ್ರದಾಯಿಕವಾಗಿ ಸಿಹಿ ವಿನಿಮಯ ಮಾಡಿಕೊಳ್ಳಲಾಯಿತು.