ನವದೆಹಲಿ: ಕೃಷಿ ತ್ಯಾಜ್ಯಗಳಿಗೆ ವ್ಯಾಪಕವಾಗಿ ಬೆಂಕಿ ಹಚ್ಚುತ್ತಿರುವುದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ವಾಯು ಮಾಲಿನ್ಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ, ಉಪಗ್ರಹ ಆಧಾರಿತ ಚಿತ್ರಗಳನ್ನು ಪಡೆದು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಉತ್ತರ ಭಾರತದ ಪಂಜಾಬ್ ಹಾಗೂ ಹರಿಯಾಣದ ಭತ್ತದ ಗದ್ದೆಗಳಲ್ಲಿನ ತ್ಯಾಜ್ಯಗಳಿಗೆ ರೈತರು ಬೆಂಕಿ ಹಚ್ಚುತ್ತಿದ್ದಾರೆ. ದೆಹಲಿಯಲ್ಲಿನ ಕನಿಷ್ಠ ತಾಪಮಾನ ಮತ್ತು ಹೊಗೆ ಸಮಸ್ಯೆಯಿಂದ ಉಂಟಾಗಿರುವ ಹೊಂಜುವಿನಿಂದ ದೆಹಲಿಯ ಜನರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರನ್ನು ಪತ್ತೆ ಮಾಡುವ ಸಲುವಾಗಿ ನಿತ್ಯ ಭಾರತದ ಭೂ ಪ್ರದೇಶದ ಮೇಲೆ ಎರಡು ಬಾರಿ ಹಾದುಹೋಗುವ ನಾಸಾದ ಉಪಗ್ರಹದ ಚಿತ್ರದ ನೆರವನ್ನು ಪಡೆಯಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿನ ವಾಯು ಮಾಲಿನ್ಯಕ್ಕೆ ಗರಿಷ್ಠ ಕೊಡುಗೆ ನೀಡುತ್ತಿರುವ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವವರನ್ನು ಪತ್ತೆ ಮಾಡಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಸಿದ್ಧಪಡಿಸಿ ನೀಡುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರ ಕೇಳಿತ್ತು. ಇದಕ್ಕೆ ಪೂರಕವಾಗಿ ನಿಯಮಗಳೂ ರೂಪಗೊಂಡಿದ್ದು, ಅವು ಈಗ ಪರೀಕ್ಷಾ ಹಂತದಲ್ಲಿವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಈ ಬಾರಿ ಉಂಟಾಗಿರುವ ಹೊಂಜು ಸಮಸ್ಯೆಯಿಂದ ಗಾಳಿಯ ಗುಣಮಟ್ಟವು ತೀರಾ ಕೆಳಮಟ್ಟಕ್ಕೆ ಕುಸಿದಿದ್ದು, ಎಕ್ಯೂಐ 494ಕ್ಕೆ ಕುಸಿದಿದೆ. ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳೂ ಹೆಚ್ಚಾಗಿವೆ. ಮಾಲಿನ್ಯ ಪ್ರಮಾಣ ತಗ್ಗಿಸಲು ದೆಹಲಿ ಸರ್ಕಾರುವ ವಾಹನಗಳ ಸಂಚಾರದಲ್ಲಿ ಸಮಯ ಬದಲಾವಣೆ ಮಾಡಿದೆ. ಪ್ರಾಥಮಿಕ ಶಾಲೆಗಳನ್ನು ಆನ್‌ಲೈನ್ ಮೂಲಕವೇ ನಡೆಸಲು ಸೂಚಿಸಿದೆ. ಜತೆಗೆ ಸರ್ಕಾರಿ ಕಚೇರಿಗಳ ಸಮಯದಲ್ಲೂ ಬದಲಾವಣೆ ಮಾಡಿದೆ.
ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಎಕ್ಯೂಐ ಸೂಚ್ಯಂಕದ ಪ್ರಕಾರ 0ಯಿಂದ 50ರವರೆಗೆ ಆರೋಗ್ಯಕರ, 400ರ ನಂತರ ಅತ್ಯಂತ ಅಪಾಯಕಾರಿ ಎಂದು ಭಾರತದಲ್ಲಿ ಪರಿಗಣಿಸಲಾಗುತ್ತದೆ. ಶೀತ ಗಾಳಿ, ದೂಳು, ಹೊಗೆ ಹಾಗೂ ವಾಹನಗಳ ಹೊಗೆಯಿಂದಾಗಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗುತ್ತಿರುವುದರಿಂದ ಜನರ ಜೀವಿತಾವಧಿಯಲ್ಲಿ ಐದು ವರ್ಷ ಕಡಿತವಾಗುತ್ತಿದೆ ಎಂದು ಅಧ್ಯಯನಗಳು ಹೇಳಿವೆ.