ಕೀವ್: ಉಕ್ರೇನ್‌ನ ಹಲವು ಪ್ರದೇಶಗಳ ಮೇಲೆ ರಷ್ಯಾ 188 ಡ್ರೋನ್‌ಗಳನ್ನು ಉಡಾಯಿಸಿದೆ ಎಂದು ಉಕ್ರೇನ್ ವಾಯುಪಡೆ ಮಂಗಳವಾರ ಹೇಳಿದೆ. ಒಂದೇ ಸಲಕ್ಕೆ ಇಷ್ಟೊಂದು ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿರುವುದು ದಾಖಲೆ ಎಂದು ವಿವರಿಸಿದೆ.
17 ಪ್ರದೇಶಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಸಾವು-ನೋವಿನ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಯಾಗಿಲ್ಲ.
ಹೆಚ್ಚಿನ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಆದರೆ, ಕೆಲವು ಡ್ರೋನ್‌ಗಳು ಅಪಾರ್ಟ್‌ಮೆಂಟ್‌ಗಳು, ಕಟ್ಟಡಗಳು ಮತ್ತು ರಾಷ್ಟ್ರೀಯ ವಿದ್ಯುತ್ ಗ್ರಿಡ್‌ನಂತಹ ಪ್ರಮುಖ ಮೂಲಸೌಕರ್ಯಗಳನ್ನು ಹಾನಿಗೊಳಿಸಿವೆ ಎಂದು ಅದು ಹೇಳಿದೆ.
ರಷ್ಯಾ ಪಡೆಗಳು ಈ ವರ್ಷದ ಮಧ್ಯದಿಂದ ಉಕ್ರೇನ್‌ನ ಜನವಸತಿ ಪ್ರದೇಶಗಳ ಮೇಲೆ ಭಾರಿ ಡ್ರೋನ್, ಕ್ಷಿಪಣಿ ಹಾಗೂ ಗ್ಲೈಡ್ ಬಾಂಬ್ ದಾಳಿ ನಡೆಸಿವೆ.
ಕಳೆದೊಂದು ವರ್ಷದಿಂದ ಯುದ್ಧಭೂಮಿಯಲ್ಲಿ ಹಲವು ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ. ಅದರಲ್ಲೂ ಪೂರ್ವ ಡೊನೆಟ್ಸ್ಕ್ ಪ್ರದೇಶದಲ್ಲಿ ಗಮನಾರ್ಹವಾಗಿ ಯುದ್ಧತಂತ್ರದಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಪಾಶ್ಚಿಮಾತ್ಯ ಮಿಲಿಟರಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿಯಿಡೀ ಕೀವ್ ಪ್ರದೇಶದಲ್ಲಿ ವಾಯುದಾಳಿ ಎಚ್ಚರಿಕೆಯ ಸಂದೇಶ ಮೊಳಗಿತು. ಕಳೆದ 24 ಗಂಟೆಗಳಲ್ಲಿ ಡೊನೆಟ್ಸ್ಕ್ ಪ್ರದೇಶದ ಪೊಕ್ರೊವ್ಸ್ಕ್ ಮತ್ತು ಕುರಾಖೋವ್ ಬಳಿ ಘರ್ಷಣೆ ತೀವ್ರಗೊಂಡಿದೆ ಎಂದು ಉಕ್ರೇನ್ ಸೇನೆ ಹೇಳಿದೆ.
ಈ ನಡುವೆ, ಉಕ್ರೇನ್ ಉಡಾಯಿಸಿದ 39 ಡ್ರೋನ್‌ಗಳನ್ನು ಮಂಗಳವಾರ ಗಡಿಯಲ್ಲೇ ಹೊಡೆದುರುಳಿಸಲಾಯಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.