ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 86 ವರ್ಷದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು ಸಲ್ಲಿಸಿರುವ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಾಧೀಶರಾದ ಎಂ.ಎಂ. ಸುಂದ್ರೇಶ್ ಮತ್ತು ಅರವಿಂದ್ ಕುಮಾರ್ ಅವರ ಪೀಠವು, 'ಇದು ಪೋಕ್ಸೊ ಪ್ರಕರಣವಾಗಿರುವುದರಿಂದ ವೈದ್ಯಕೀಯ ಆಧಾರದ ಮೇಲೆ ಅಸಾರಾಂ ಬಾಪು ಅವರ ಅರ್ಜಿಯನ್ನು ಪರಿಗಣಿಸಲಾಗಿದೆ' ಎಂದು ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ಅಸಾರಾಂ ಬಾಪು ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಅಸಾರಾಂ ಅವರು ಅಪರಾಧಿ ಎಂದು ಗುಜರಾತ್‌ನ ನ್ಯಾಯಾಲಯ 2023ರ ಜನವರಿಯಲ್ಲಿ ತೀರ್ಪು ನೀಡಿತ್ತು. ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಇದೇ ವರ್ಷದ ಆಗಸ್ಟ್‌ನಲ್ಲಿ ತಿರಸ್ಕರಿಸಿತ್ತು.
ನವೆಂಬರ್ 16ರಂದು ವಕೀಲರಾದ ರಾಜೇಶ್ ಇನಾಂದಾರ್ ಮತ್ತು ಶಾಶ್ವತ್ ಅನಂದ್ ಅವರ ಮೂಲಕ ಅಸಾರಾಂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ವೈದ್ಯಕೀಯ ಅಥವಾ ಸ್ವತಂತ್ರ ಸಾಕ್ಷ್ಯಗಳಿಲ್ಲ ಎಂದು ಪ್ರತಿಪಾದಿಸಿದ್ದ ಅವರು, ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿದ್ದರು.
ತಮ್ಮ ಪ್ರತಿಷ್ಠೆಯನ್ನು ಹಾಳು ಮಾಡಲು ಮತ್ತು ಆಶ್ರಮದಿಂದ ಹೊರಹಾಕಲು ಸುಳ್ಳು ಆರೋಪ ಹೊರಿಸಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು.