ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪರ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಧಿ ಸಂಗ್ರಹಿಸುತ್ತಿದ್ದ ವ್ಯಕ್ತಿಗೆ ದೇಶ ತೊರೆದು ಭಾರತಕ್ಕೆ ಹೋಗುವಂತೆ ಜನಾಂಗೀಯ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ಡೆಮಾಕ್ರಟಿಕ್ ಪಕ್ಷದ ಪರ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಅಜಯ್ ಜೈನ್ ಭತುರಿಯಾ ಅವರಿಗೆ ಬೆದರಿಕೆ ಸಂದೇಶ ಬಂದಿದೆ.
'ನೀವು ಅಮೆರಿಕನ್ನರಿಗೆ ಉತ್ತಮವಾದುದ್ದನ್ನು ಮಾಡುತ್ತಿದ್ದೀರಿ ಎಂದು ಹೇಳಿಕೊಳ್ಳುತ್ತೀರಿ, ಆದರೆ ಏನನ್ನೂ ಮಾಡುತ್ತಿಲ್ಲ. ಅಮೆರಿಕದ ಬಗ್ಗೆ ನಿಮಗೆ ಕಾಳಜಿಯಿಲ್ಲ. ನೀವೊಬ್ಬ ಭಾರತೀಯ. ಭಾರತೀಯರ ಬಗ್ಗೆ ಮಾತ್ರ ಕಾಳಜಿವಹಿಸುತ್ತೀರಿ. ಭಾರತಕ್ಕೆ ಉತ್ತಮವಾದುದ್ದನ್ನು ಮಾಡುವುದಾದರೆ ಇಲ್ಲಿ ಏಕೆ ಇರುವಿರಿ?. ಅಮೆರಿಕದಲ್ಲಿ ಭಿಕ್ಷುಕರಾಗುವ ಬದಲು ಭಾರತಕ್ಕೆ ಹೋಗಿ ನಾಯಕರಾಗಿ' ಎಂದು ಅಪರಿಚಿತ ಸಂಖ್ಯೆಯಿಂದ ಅಜಯ್ ಅವರಿಗೆ ಸಂದೇಶ ಬಂದಿದೆ ಎಂದು ಹೇಳಲಾಗಿದೆ.
ಅಜಯ್ ಅವರು ಸ್ಥಳಿಯ ಹವಾಯಿಗಳು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಅಧ್ಯಕ್ಷರ ಸಲಹಾ ಆಯೋಗದಲ್ಲಿ ಕೆಲಸ ಮಾಡಿದ್ದರು. ಅಲ್ಲದೆ, ವಲಸಿಗರ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
'ಟ್ರಂಪ್ ಬೆಂಬಲಿಗರು ನನಗೆ ಭಾರತಕ್ಕೆ ತೆರಳುವಂತೆ ಬೆದರಿಕೆ ಹಾಕಿದ್ದಾರೆ' ಎಂದು ಸಂಜಯ್ ಆರೋಪಿಸಿದ್ದಾರೆ.