ಜಾಗತಿಕವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲಿಗೆ ಇದು ಮಾರಣಾಂತಿಕ ಕಾಯಿಲೆಯಾಗಿದೆ. ಪ್ರತಿದಿನ ಜಾಗತಿಕವಾಗಿ 2,500 ಮಕ್ಕಳು ನ್ಯುಮೋನಿಯಾಕ್ಕೆ ಬಲಿಯಾಗುತ್ತಿದ್ದಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. 65 ವರ್ಷ ದಾಟಿದವರಿಗೂ ಇದು ಹೆಚ್ಚು ಅಪಾಯಕಾರಿಯಾಗಬಲ್ಲದು.
ನ್ಯುಮೋನಿಯಾ ಬಗ್ಗೆ ನೀವು ಕೇಳಿರಬಹುದು. ಇದು ಶ್ವಾಸಕೋಶಕ್ಕೆ ಹಾನಿಮಾಡುವ ಸೋಂಕಾಗಿದ್ದು ಬಾಯಿ ಅಥವಾ ಮೂಗಿನ ಮೂಲಕ ನಡೆಸುವ ಉಚ್ಛಾಸದ ಮೂಲಕ ಶ್ವಾಸಕೋಶಗಳ ಒಳಕ್ಕೆ ಸೇರುವ ಸೂಕ್ಷ್ಮಜೀವಿಗಳಿಂದಾಗಿ ಈ ಸೋಂಕು ಉಂಟಾಗುತ್ತದೆ. ಈ ಕಾಯಿಲೆಯ ಸೋಂಕು ಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದವರಿಗೆ ಹಬ್ಬುವ ಸಾಧ್ಯತೆಯಿದೆ. ಜಾಗತಿಕವಾಗಿ ಇದಕ್ಕೆ ಒಳಗಾಗುತ್ತಿರುವವರು ಮತ್ತು ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 12ನ್ನು ಜಾಗತಿಕ ನ್ಯುಮೋನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ನ್ಯುಮೋನಿಯಾ ಮತ್ತದರ ಲಕ್ಷಣಗಳು, ಚಿಕಿತ್ಸೆ ಹಾಗೂ ಅದರ ತಡೆ, ನಿಯಂತ್ರಣದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಕ್ಕಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶ್ವಾಸಕೋಶಗಳಿಗೆ ತಗಲುವ ಈ ಮಾರಕ ಸೋಂಕಿನ ಬಗ್ಗೆ ಮಾಹಿತಿ ನೀಡುವುದಲ್ಲದೆ ಸದಾ ಎಚ್ಚರದಿಂದ ಇರುವವಂತೆ ನೋಡಿಕೊಳ್ಳುವುದು ಈ ದಿನದ ಮಹತ್ವವಾಗಿದೆ.
ವಿಶ್ವ ನ್ಯೂಮೋನಿಯ ದಿನದ ಇತಿಹಾಸವೇನು?
2009ರಲ್ಲಿ ನ್ಯುಮೋನಿಯಾದ ಕುರಿತು ಜಾಗತಿಕವಾಗಿ ಜಾಗೃತಿ ಹೆಚ್ಚಿಸಲು ಸ್ಟಾಪ್ ನ್ಯುಮೋನಿಯಾ.ಆರ್ಗ್ (https://stoppneumonia.org/) ಸಂಸ್ಥೆಯು ವಿಶ್ವ ನ್ಯುಮೋನಿಯಾ ದಿನವನ್ನು ಆರಂಭಿಸಿತು. ವರ್ಷಕ್ಕೆ ಸುಮಾರು 8 ಲಕ್ಷಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಗುವ ಈ ಕಾಯಿಲೆ ವಿರುದ್ಧ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಈ ಸಂಸ್ಥೆ ಮೊದಲೇ ಎಚ್ಚರಿಸಿದೆ. ಹೆಚ್ಚಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು ಐವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ನ್ಯುಮೋನಿಯಾ ಕಾಣಿಸಿಕೊಳ್ಳುತ್ತದೆ.
ನ್ಯೂಮೋನಿಯದ ಲಕ್ಷಣಗಳು:
ಜ್ವರ, ಚಳಿ ನಡುಕ, ಕೆಮ್ಮು, ಉಸಿರಾಡಲು ತೊಂದರೆ, ಹೃದಯ ಬಡಿತ ಮತ್ತು ಉಸಿರಾಟದ ವೇಗ ಹೆಚ್ಚುವುದು, ಅಪರೂಪಕ್ಕೆ ಹೊಟ್ಟೆ ತೊಳೆಸುವಿಕೆ, ವಾಂತಿ ಮತ್ತು ಭೇದಿ ನ್ಯುಮೋನಿಯಾದ ಲಕ್ಷಣಗಳಾಗಿವೆ. ರೋಗದ ಮುಂದುವರಿದ ಹಂತಗಳಲ್ಲಿ ರೋಗಿಯು ಗೊಂದಲಕ್ಕೀಡಾಗಬಹುದು, ಉದ್ವಿಗ್ನಗೊಳ್ಳುವ ಸಾಧ್ಯತೆಯಿದೆ.
ರೋಗವನ್ನು ಪತ್ತೆ ಮಾಡುವುದು ಹೇಗೆ?
ವೈದ್ಯರು ಇದರ ರೋಗ ಲಕ್ಷಣಗಳ ಬಗ್ಗೆ ರೋಗಿಯಿಂದ ವಿವರವಾದ ಮಾಹಿತಿ ಸಂಗ್ರಹಿಸುತ್ತಾರೆ. ದೇಹವನ್ನು ಅದರಲ್ಲೂ ವಿಶೇಷವಾಗಿ ಎದೆಯನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸುತ್ತಾರೆ. ಕಫದ ಪರೀಕ್ಷೆ, ರಕ್ತಪರೀಕ್ಷೆ ಮತ್ತು ಎದೆಯ ಎಕ್ಸ್ ರೇಗಳು ಕಾಯಿಲೆಯನ್ನು ಖಚಿತಪಡಿಸುವಲ್ಲಿ ಸಹಾಯ ಮಾಡುತ್ತವೆ. ರೋಗಿಯ ಸ್ಥಿತಿಯ ಗಂಭೀರತೆಯನ್ನು ಅವಲಂಬಿಸಿ ಮುಂದುವರಿದ ಉನ್ನತ ಪರೀಕ್ಷೆಗಳನ್ನು ನಡೆಸಿ ಯಾವ ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ರೋಗ ಹರಡಿದೆ ಎಂಬುದರ ಬಗ್ಗೆ ತಿಳಿಯಲಾಗುತ್ತದೆ.
ನ್ಯುಮೋನಿಯಾದಿಂದ ಯಾರಿಗೆ ಹೆಚ್ಚು ಅಪಾಯ
ಜಾಗತಿಕವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲಿಗೆ ಇದು ಪ್ರಾಣಾಂತಿಕ ಕಾಯಿಲೆಯಾಗಿದೆ. ಪ್ರತಿದಿನ ಜಾಗತಿಕವಾಗಿ 2,500 ಮಕ್ಕಳು ನ್ಯುಮೋನಿಯಾಕ್ಕೆ ಬಲಿಯಾಗುತ್ತಿದ್ದಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. 65 ವರ್ಷ ದಾಟಿದವರಿಗೂ ಇದು ಹೆಚ್ಚು ಅಪಾಯಕಾರಿಯಾಗಬಲ್ಲದು. ಸಿಒಪಿಡಿ ಮತ್ತು ಅಸ್ತಮಾದಂತಹ ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರು, ಧೂಮಪಾನಿಗಳು, ಮಧುಮೇಹಿಗಳು, ಮೂತ್ರಪಿಂಡ ಮತ್ತು ಯಕೃತ್ತಿನ ದೀರ್ಘಕಾಲೀನ ತೊಂದರೆ ಇರುವವರಿಗೆ ಇದು ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.