ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಡಿಸೆಂಬರ್ 10 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಹಿರಿಯ ಅಧಿಕಾರಿಯೊಬ್ಬರು ಮೊದಲ ಬಾರಿ ಢಾಕಾಗೆ ಭೇಟಿ ನೀಡುತ್ತಿದ್ದಾರೆ.
ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲವಾದರೂ, ಮಿಶ್ರಿ ಅವರು ಬಾಂಗ್ಲಾದೇಶ ವಿದೇಶಾಂಗ ಕಾರ್ಯದರ್ಶಿ ಎಂಡಿ ಜಾಶಿಮ್ ಉದ್ದೀನ್ ಅವರೊಂದಿಗೆ ಢಾಕಾ ಭೇಟಿ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ಸಮಯದಲ್ಲಿ ಮಿಶ್ರಿ ಭೇಟಿ ಮಹತ್ವ ಪಡೆದುಕೊಂಡಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿಗಳು ಮತ್ತು ಇಸ್ಕಾನ್ ನ ಚಿನ್ಮಯಿ ಕೃಷ್ಣದಾಸ್ ಅವರ ಬಂಧನ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹದಗೆಡಿಸಿದೆ.
ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಮುಂದುವರಿಯುವ ವಿಷಯವನ್ನು ಬಾಂಗ್ಲಾದೇಶ ಮಿಶ್ರಿ ಅವರ ಬಳಿ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಢಾಕಾದ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಇಸ್ಕಾನ್‌ನ 75 ಸದಸ್ಯರು ವಲಸೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ ಬುಧವಾರ ಬೆಳಗ್ಗೆ ಬೆನಾಪೋಲ್ ಚೆಕ್ ಪೋಸ್ಟ್ ಮೂಲಕ ಭಾರತ ಆಗಮಿಸಿದ್ದಾರೆ.
ಇನ್ನು ಬಂಧಿತ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್ ಅವರು ಚಿತ್ತಗಾಂಗ್ ಜೈಲಿನಲ್ಲಿದ್ದು, ಅವರ ಮುಂದಿನ ವಿಚಾರಣೆಯನ್ನು ಜನವರಿ 2ಕ್ಕೆ ನಿಗದಿಪಡಿಸಲಾಗಿದೆ.