ಇಂದೋರ್: ಮಧ್ಯಪ್ರದೇಶ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ 'ಸಾಮಾನ್ಯೀಕರಣ' ಪ್ರಕ್ರಿಯೆಯನ್ನು ಅಳವಡಿಸಿಕೊಂಡ ಕಾರಣ ಒಬ್ಬ ಅಭ್ಯರ್ಥಿಯು ಒಟ್ಟು 100 ಅಂಕಗಳಿಗೆ 101.66 ಅಂಕಗಳನ್ನು ಪಡೆದಿರುವುದು ಪತ್ತೆಯಾಗಿದೆ. ಇದನ್ನು ಖಂಡಿಸಿ ಉದ್ಯೋಗಾಕಾಂಕ್ಷಿಗಳು ಇಂದೋರ್‌ನಲ್ಲಿ ಪ್ರತಿಭಟನೆ ನಡೆಸಿದರು.
ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು, ನ್ಯಾಯಯುತ ತನಿಖೆಗೆ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಉದ್ಯೋಗಾಕಾಂಕ್ಷಿಗಳು, ಬಳಿಕ ಮುಖ್ಯಮಂತ್ರಿಗೆ ಬರೆದಿರುವ ಮನವಿ ಪತ್ರವನ್ನು ಡಿಸಿಗೆ ಸಲ್ಲಿಸಿದರು.
ಪ್ರತಿಭಟನಾಕಾರರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ 2023ರಲ್ಲಿ ಅರಣ್ಯ ಮತ್ತು ಬಂಧಿಖಾನೆ ಇಲಾಖೆಗಳ ಸಿಬ್ಬಂದಿ ನೇಮಕಾತಿಗೆ ನಡೆದ ಜಂಟಿ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬರು 100ಕ್ಕೆ 101.66 ಅಂಕ ಪಡೆದು ಟಾಪರ್ ಆಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಉಲ್ಲೇಖಿಸಲಾಗಿದೆ.
ಮಧ್ಯಪ್ರದೇಶದ ಉದ್ಯೋಗಿಗಳ ನೇಮಕಾತಿ ಮಂಡಳಿ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಡಿಸೆಂಬರ್ 13ರಂದು ಹೊರಬಿದ್ದಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮಂಡಳಿ, ಹೊಸ ನಿಯಮಗಳ ಪ್ರಕಾರ ಸಾಮಾನ್ಯೀಕರಣ ಪ್ರಕ್ರಿಯೆ ಅಳವಡಿಸಿಕೊಂಡಿರುವುದರಿಂದ ಅಭ್ಯರ್ಥಿಯೊಬ್ಬರು 100ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದು ಹೇಳಿತ್ತು.
'ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬರು ನಿಗದಿತ ಅಂಕಗಳಿಗಿಂತ ಅಧಿಕ ಅಂಕ ಗಳಿಸಿರುವ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು'ಎಂದು ಪ್ರತಿಭಟನಾಕಾರರ ನೇತೃತ್ವವಹಿಸಿದ್ದ ಉದ್ಯೋಗಾಕಾಂಕ್ಷಿ ಗೋಪಾಲ್ ಪ್ರಜಾಪತ್ ಹೇಳಿದ್ದಾರೆ.
ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.