ಕೋಝಿಕ್ಕೋಡ್: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪ್ರವಾಹ ಪರಿಹಾರಕ್ಕೆ ಮೀಸಲಿಟ್ಟ ಮೊತ್ತಕ್ಕೂ ಆರ್ ಟಿಐ ಅಡಿಯಲ್ಲಿ ಕೇಳಿದಾಗ ಪಡೆದ ಮೊತ್ತಕ್ಕೂ 108 ಕೋಟಿ ವ್ಯತ್ಯಾಸವಾಗಿದೆ.
ಸರ್ಕಾರದ ಅಧಿಕೃತ ವೆಬ್‍ಸೈಟ್ ಪ್ರಕಾರ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪ್ರವಾಹ ಪರಿಹಾರ ಚಟುವಟಿಕೆಗಳಿಗೆ 4738.77 ಕೋಟಿ ರೂ.ನೀಡಲಾಗಿದೆ ಎಂದಿದೆ. ಆದರೆ ಆರ್.ಟಿ.ಐ. ದಾಖಲೆಯಲ್ಲಿ ಸರ್ಕಾರ ಹೇಳಿದ್ದು 4630 ಕೋಟಿ! ಅಂದರೆ 108 ಕೋಟಿ ರೂಪಾಯಿ ವ್ಯತ್ಯಾಸವಾಗಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2018 ಮತ್ತು 2019ರಲ್ಲಿ ಪ್ರವಾಹ ಪರಿಹಾರ ಮತ್ತು ಪುನರ್ ನಿರ್ಮಾಣಕ್ಕೆ ಹಣ ಮಂಜೂರು ಮಾಡಿರುವ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಡಿಸೆಂಬರ್ 29 ರಂದು ಮುಖ್ಯಮಂತ್ರಿಗಳ ಪರಿಹಾರ ಪೋರ್ಟಲ್‍ನಲ್ಲಿ ತೋರಿಸಿರುವ ಮಾಹಿತಿಯ ಪ್ರಕಾರ, ಪ್ರವಾಹಕ್ಕೆ 4738.77 ಕೋಟಿ ರೂ.ನೀಡಲಾಗಿದೆ.
ಇದೇ ವೇಳೆ, ಕಂದಾಯ ಇಲಾಖೆ (ಡಿಆರ್‍ಎಫ್‍ಎ) ಕೊಚ್ಚಿ ಸ್ಥಳೀಯ ಆರ್‍ಟಿಐ ಕಾರ್ಯಕರ್ತ ಕೆ. ಗೋವಿಂದನ್ ನಂಬೂದಿರಿಗೆ ಸೆ.28ರಂದು ನೀಡಿದ ಉತ್ತರದಲ್ಲಿ 4630 ಕೋಟಿ ಮಾತ್ರ ಮಂಜೂರು ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಪರಿಹಾರ ನಿಧಿಯ ಬಳಕೆಗೆ ಸಂಬಂಧಿಸಿದಂತೆ ಅನೇಕ ಜನರು ಅನೇಕ ಆಕ್ಷೇಪಣೆಗಳನ್ನು ಮತ್ತು ಆರೋಪಗಳನ್ನು ಎತ್ತಿದ್ದಾರೆ. ಈಗ ಹೊಸ ಅಂಕಿಅಂಶಗಳು ಮತ್ತೆ ಅನುಮಾನಗಳನ್ನು ಹುಟ್ಟುಹಾಕಿವೆ.