ನವದೆಹಲಿ: ಲೋಕಸಭೆಯಲ್ಲಿ 'ಭಾರತದ ಸಂವಿಧಾನದ 75 ವರ್ಷಗಳ ವೈಭವಯುತ ಪ್ರಯಾಣ' ಕುರಿತು ಎರಡು ದಿನಗಳ ಕಾಲ ನಡೆದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ನೀಡಿರುವ ಉತ್ತರಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.
'ಶಾಲೆಯಲ್ಲಿ ಡಬಲ್ ಗಣಿತ ಕ್ಲಾಸ್ ಕೇಳಿದಂತಾಯ್ತು, ತುಂಬಾ ಬೋರಿಂಗ್ ಆಗಿತ್ತು' ಎಂದು ಪ್ರಧಾನಿ ಅವರ 110 ನಿಮಿಷಗಳ ಭಾಷಣ ಕುರಿತು ಪ್ರಿಯಾಂಕಾ ವ್ಯಂಗ್ಯವಾಡಿದ್ದಾರೆ.
ಸಂವಿಧಾನದ ಚರ್ಚೆಯ ವೇಳೆ ಪ್ರಧಾನಿ ಅವರ 11 ನಿರ್ಣಯಗಳನ್ನು 'ಟೊಳ್ಳು' ಎಂದು ಟೀಕಿಸಿರುವ ಪ್ರಿಯಾಂಕಾ, 'ಭ್ರಷ್ಟಾಚಾರದ ಕುರಿತು 'ಶೂನ್ಯ ಸಹಿಷ್ಣುತೆ' ನೀತಿ ಹೊಂದಿದ್ದರೆ ಅದಾನಿ ಹಗರಣದ ವಿಷಯದಲ್ಲಿ ಬಿಜೆಪಿ ಚರ್ಚಗೆ ಏಕೆ ಒಪ್ಪುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.
'ಪ್ರಧಾನಿ ಹೊಸತೇನು ಮಾತನಾಡಿಲ್ಲ. ತುಂಬಾ ಬೋರಿಂಗ್ ಆಗಿತ್ತು. ದಶಕಗಳ ಹಿಂದೆ ಶಾಲೆಯ ದಿನಗಳಲ್ಲಿ ಡಬಲ್ ಗಣಿತ ಕ್ಲಾಸ್‌ನಲ್ಲಿ ಕುಳಿತಂತೆ ಭಾಸವಾಯಿತು' ಎಂದು ಹೇಳಿದರು.
'ಜೆ.ಪಿ.ನಡ್ಡಾ ಕೈಗಳನ್ನು ಉಜ್ಜುತ್ತಿದ್ದರು. ಪ್ರಧಾನಿ ನೋಡಿದಾಗ ಗಮನವಿಟ್ಟು ಆಲಿಸುತ್ತಿರುವಂತೆ ವರ್ತಿಸಿದರು. ಅಮಿತ್ ಶಾ ಸಹ ತಲೆಯ ಮೇಲೆ ಕೈಯಿಟ್ಟಿದ್ದರು. ಪಿಯೂಷ್ ಗೋಯಲ್ ನಿದ್ರೆಗೆ ಜಾರಿದ್ದರು. ಇವೆಲ್ಲವೂ ನನಗೆ ಹೊಸ ಅನುಭವ ಆಗಿತ್ತು. ಪ್ರಧಾನಿ ಏನಾದರೂ ಹೊಸತನ್ನು ಹೇಳುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ' ಎಂದು ಪ್ರಿಯಾಂಕಾ ಹೇಳಿದ್ದಾರೆ.
ಈ ಮೊದಲು ಸಂಸತ್ತಿನಲ್ಲಿ ಚೊಚ್ಚಲ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ್ದರು. ಮಣಿಪುರ, ಹಾಥರಸ್ ಹಾಗೂ ಸಂಭಲ್‌ನ ಹಿಂಸಾಚಾರದ ಸಂದರ್ಭಗಳಲ್ಲಿ ಪ್ರಧಾನಿ ಮೌನವನ್ನು ಲೇವಡಿ ಮಾಡಿದ್ದರು. 'ದೇಶದ ಸಂವಿಧಾನವು ಸಂಘದ ನಿಯಮ (ಕಾನೂನು) ಪುಸ್ತಕವಲ್ಲ ಎಂಬುದು ಪ್ರಧಾನಿ ಅವರಿಗೆ ಅರ್ಥವಾಗಿಲ್ಲ' ಎಂದು ಹೇಳಿದ್ದರು.