ಬಂದಾ ಅಚೆ : ಇಂಡೊನೇಷ್ಯಾ ಕರಾವಳಿಯಲ್ಲಿ ರೋಹಿಂಗ್ಯಾ ನಿರಾಶ್ರಿತರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 116 ಜನರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಶನಿವಾರ ತಿಳಿಸಿದೆ.
ಈಶಾನ್ಯ ಸುಮಾತ್ರ ದ್ವೀಪದಿಂದ ಸ್ವಲ್ಪ ದೂರದಲ್ಲಿ ದೋಣಿಯು ಮುಳುಗಿದೆ. ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ರಕ್ಷಿಸಲ್ಪಟ್ಟಿರುವ 116 ಮಂದಿ ಸದ್ಯ ಸಮುದ್ರ ತೀರದಲ್ಲಿದ್ದಾರೆ. ಅವರನ್ನು ಎಲ್ಲಿಗೆ ಕರೆದೊಯ್ಯಬೇಕು ಎಂಬ ಕುರಿತು ಇನ್ನೂ ನಿರ್ಧರಿಸಿಲ್ಲ' ಎಂದು 'ಯುಎನ್‌ಎಚ್‌ಸಿಆರ್'ನ ಫೈಸಲ್ ರೆಹಮಾನ್ ತಿಳಿಸಿದ್ದಾರೆ.
ಮ್ಯಾನ್ಮಾರ್‌ನಲ್ಲಿ ತೀವ್ರ ದೌರ್ಜನ್ಯಕ್ಕೆ ಒಳಗಾಗುತ್ತಿರುವ ರೋಹಿಂಗ್ಯಾ ಸಮುದಾಯದವರು ಅಲ್ಲಿಂದ ಪಾರಾಗಲು ಮಲೇಷ್ಯಾ ಹಾಗೂ ಇಂಡೊನೇಷ್ಯಾಗೆ ವಲಸೆ ಹೋಗಲು ದೀರ್ಘ ಮತ್ತು ಅಪಾಯಕಾರಿ ಸಮುದ್ರ ಪ್ರಯಾಣ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ದೋಣಿ ಮಗುಚಿ ಹಲವು ಮಂದಿ ಸಾವಿಗೀಡಾಗಿದ್ದಾರೆ.