ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಸುಮಾರು ₹117 ಕೋಟಿ ಸೈಬರ್ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ದೆಹಲಿ ಮತ್ತು ಸುತ್ತಲಿನ 10 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ಅಪರಿಚತ ವಿದೇಶಿ ನಟರು ಮತ್ತು ಸಂಘಟಿತ ಸೈಬರ್ ಅಪರಾಧಿಗಳು ವ್ಯವಸ್ಥಿತವಾಗಿ ದೇಶದಾದ್ಯಂತ ಹಣಕಾಸು ವಂಚನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ಸಂಯೋಜನಾ ಕೇಂದ್ರ (14ಸಿ) ನೀಡಿದ್ದ ದೂರಿನ ಮೇರೆಗೆ ಸಿಬಿಐ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು.
ದೂರನ್ನು ಆಧರಿಸಿ, 2023ರ ಜನವರಿ 1ರಿಂದ 2023ರ ಅಕ್ಟೋಬರ್ 17ರವರೆಗೆ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ (ಎನ್‌ಸಿಆರ್‌ಪಿ) ದಾಖಲಾದ 3,903 ದೂರುಗಳನ್ನು ಸಿಬಿಐ ವಿಶ್ಲೇಷಣೆಗೆ ಒಳಪಡಿಸಿತು. ವೆಬ್‌ಸೈಟ್, ವಾಟ್ಸ್‌ಆಯಪ್, ಟೆಲಿಗ್ರಾಮ್ ಆಯಪ್‌ಗಳನ್ನು ಬಳಸಿ ಈ ಜಾಲದವರು ಜನರಿಗೆ ಮೋಸ ಮಾಡಿ ₹117 ಕೋಟಿಯಷ್ಟು ಸುಲಿಗೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ವಂಚನೆಗಳನ್ನು ನಡೆಸುತ್ತಿರುವವರನ್ನು ಪತ್ತೆ ಹಚ್ಚಲು ಸಿಬಿಐ ವರ್ಷದಿಂದ ನಿಗಾವಹಿಸಿದ್ದು, ವಿಸ್ತೃತವಾಗಿ ತಾಂತ್ರಿಕ ವಿಶ್ಲೇಷಣೆಯಲ್ಲೂ ತೊಡಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರ ಪರಿಣಾಮ 10 ಶಂಕಿತರನ್ನು ಪತ್ತೆಹಚ್ಚುವಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ಯಶಸ್ವಿಯಾಗಿದ್ದು, ಬುಧವಾರ ದೆಹಲಿಯ ಎಂಟು ಮತ್ತು ಗುರುಗ್ರಾಮದ ಎರಡು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅವರು ವಿವರಿಸಿದ್ದಾರೆ.