ನವದೆಹಲಿ: ದೇಶದ ಪ್ರಮುಖ ಆರು ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಪ್ರತಿ ಏಳು ಪೈಲಟ್‌ಗಳ ಪೈಕಿ ಒಬ್ಬರು ಮಹಿಳಾ ಪೈಲಟ್ ಆಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೈಲಟ್‌ಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಇಂಡಿಗೊ ಅಗ್ರಸ್ಥಾನದಲ್ಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ.
ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ 236 ವಿದೇಶಿಗರೂ ಸೇರಿದಂತೆ ಒಟ್ಟು 11,755 ಪೈಲಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 10,008 ಪುರುಷರಾಗಿದ್ದರೆ, 1,767 ಮಹಿಳೆಯರಾಗಿದ್ದಾರೆ. ಭಾರತದಲ್ಲಿ ಒಟ್ಟಾರೆ 26,536 ಪರವಾನಗಿ ಹೊಂದಿರುವ ಪೈಲಟ್‌ಗಳಿದ್ದಾರೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅಂಕಿ ಅಂಶ ನೀಡಿದ್ದಾರೆ.
ದೇಶದಲ್ಲಿ ಶೇ 15ರಷ್ಟು ಮಹಿಳಾ ಪೈಲಟ್‌ಗಳಿದ್ದಾರೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಹಿಳಾ ಪೈಲಟ್‌ಗಳ ಸರಾಸರಿ ಶೇ 5ರಷ್ಟಿದೆ ಎಂದು ವರದಿ ಹೇಳುತ್ತದೆ.
ಇಂಡಿಗೊ ಅತಿ ಹೆಚ್ಚು ಪೈಲಟ್‌ಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆಯಾಗಿದೆ. ಇಲ್ಲಿ ಒಟ್ಟು 5,714 ಪೈಲಟ್‌ಗಳಿದ್ದು, ಇದರಲ್ಲಿ 4,383 ಪುರುಷರು, 791 ಮಹಿಳಾ ಪೈಲಟ್‌ಗಳಾಗಿದ್ದಾರೆ. ಅಲ್ಲದೆ 34 ವಿದೇಶಿ ಪೈಲಟ್‌ಗಳೂ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು.
ಅಲಯನ್ಸ್ ಏರ್‌ನಲ್ಲಿ ಮಹಿಳಾ ಪೈಲಟ್‌ಗಳ ಅನುಪಾತ ಹೆಚ್ಚಿದೆ. ಇಲ್ಲಿನ 144 ಪೈಲಟ್‌ಗಳ ಪೈಕಿ 25 (ಶೇ 17.36) ಮಹಿಳೆಯರು. ಇಂಡಿಗೊದಲ್ಲಿ ಈ ಪ್ರಮಾಣ ಶೇ 15.28ರಷ್ಟಿದೆ.
ಏರ್ ಇಂಡಿಯಾ ಶೇ 15.62, ಸ್ಪೈಸ್‌ಜೆಟ್ ಶೇ 16.39, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಶೇ 12.96, ಎಸ್‌ಎನ್‌ವಿ ವಿಮಾನಯಾನ ಸಂಸ್ಥೆಯಲ್ಲಿ ಶೇ 14.01ರಷ್ಟು ಮಹಿಳಾ ಪೈಲಟ್‌ಗಳಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ಭಾರತೀಯ ವಿಮಾನಯಾನ ಉದ್ಯಮಕ್ಕೆ ಮುಂದಿನ ಐದು ವರ್ಷಗಳಲ್ಲಿ ಗಣನೀಯ ಸಂಖ್ಯೆಯ ಪೈಲಟ್‌ಗಳ ಅಗತ್ಯವಿದೆ ಎಂದು ಮೊಹೋಲ್ ಹೇಳಿದ್ದಾರೆ.