ರಾಂಚಿ: ಹೇಮಂತ್ ಸೊರೇನ್ ನೇತೃತ್ವದ ಸರ್ಕಾರದ ಸಂಪುಟ ಸದಸ್ಯರಾಗಿ ಒಟ್ಟು 11 ಮಂದಿ ಸಚಿವರು ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಿದರು.
ಜೆಎಂಎಂನ 6, ಆರ್‌ಜೆಡಿಯ ಒಬ್ಬರು ಹಾಗೂ ಕಾಂಗ್ರೆಸ್‌ನ ನಾಲ್ವರಿಗೆ ಸಚಿವ ಸ್ಥಾನ ದೊರೆತಿದೆ.ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಜೆಎಂಎಂನ ಸುದಿವ್ಯ ಕುಮಾರ್, ದೀಪಕ್ ಬಿರುವಾ, ರಾಮದಾಸ್ ಸೊರೇನ್, ಚಾಮ್ರಾ ಲಿಂಡಾ, ಯೋಗೇಂದ್ರ ಪ್ರಸಾದ್, ಹಫಿಜುಲ್ ಹಸನ್. ಕಾಂಗ್ರೆಸ್‌ನ ದೀಪಿಕಾ ಪಾಂಡೆ ಸಿಂಗ್, ಶಿಲ್ಪಿ ನೇಹಾ ಟಿರ್ಕಿ, ಇರ್ಫಾನ್ ಅನ್ಸಾರಿ, ರಾಧಾಕೃಷ್ಣ ಕಿಶೋರ್ ಹಾಗೂ ಆರ್‌ಜೆಡಿಯ ಸಂಜಯ್ ಪ್ರಸಾದ್ ಯಾದವ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಗೆಲುವಿನ ನಗೆ ಬೀರಿ, ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದೆ. ಜೆಎಂಎಂ ನಾಯಕ ಹೇಮಂತ್ ಸೊರೇನ್ ನವೆಂಬರ್ 28 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.