ನವದೆಹಲಿ: ಮಹಾಕುಂಭ ಮೇಳದ ವೇಳೆ ಭಕ್ತರ ಅನುಕೂಲಕ್ಕಾಗಿ 3,000 ವಿಶೇಷ ರೈಲುಗಳು ಸೇರಿದಂತೆ ಸುಮಾರು 13,000 ರೈಲುಗಳನ್ನು ಭಾರತೀಯ ರೈಲ್ವೇ ಓಡಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಿಂದ ರೈಲಿನಲ್ಲಿ ಪ್ರಯಾಗ್‌ರಾಜ್‌ಗೆ ಆಗಮಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಹಾಕುಂಭ ಮೇಳಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಸಿದ್ಧತೆಗಳನ್ನು ಪರಿಶೀಲಿಸಿದರು. ಮೇಳದ ಸಮಯದಲ್ಲಿ ಸುಮಾರು 1.5 ರಿಂದ 2 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪವಿತ್ರ ವಾರಣಾಸಿ ನಗರವನ್ನು ತಲುಪುವ ನಿರೀಕ್ಷೆಯಿದೆ.
ಪ್ರಯಾಗರಾಜ್‌ನಲ್ಲಿ ಈಶಾನ್ಯ ರೈಲ್ವೆ, ಉತ್ತರ ರೈಲ್ವೆ ಮತ್ತು ಉತ್ತರ ಮಧ್ಯ ರೈಲ್ವೆ ವ್ಯಾಪ್ತಿಯ ಹಲವಾರು ನಿಲ್ದಾಣಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 'ಗಂಗಾ ನದಿಯ ಮೇಲೆ ನಿರ್ಮಿಸಲಾದ ಹೊಸ ಸೇತುವೆಯನ್ನು ನಾನು ಪರಿಶೀಲಿಸಿದ್ದೇನೆ, ಇದನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಹೊಸ ಸೇತುವೆಯನ್ನು 100 ವರ್ಷಗಳ ನಂತರ ಗಂಗಾ ನದಿಯ ಮೇಲೆ ನಿರ್ಮಿಸಲಾಗಿದೆ. ನಾನು ಐದು ನಿಲ್ದಾಣಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಈ ನಿಲ್ದಾಣಗಳಲ್ಲಿ ಭಕ್ತರು ತಮ್ಮ ರೈಲುಗಳು ಬರುವವರೆಗೆ ಕುಳಿತುಕೊಳ್ಳಲು ಸಾಧ್ಯವಾಗುವ ತಂಗುದಾಣ ಪ್ರದೇಶಗಳು ತುಂಬಾ ಚೆನ್ನಾಗಿವೆ. ತಂಗುದಾಣ ಪ್ರದೇಶಗಳು ಮತ್ತು ಟಿಕೆಟ್‌ಗಳಲ್ಲಿ ಕಲರ್ ಕೋಡಿಂಗ್ ಅನ್ನು ಬಳಸಲಾಗಿದೆ ಎಂದು ಹೇಳಿದರು.
"ಮಹಾ ಕುಂಭ ಮೇಳಕ್ಕಾಗಿ, ಪ್ರಯಾಗ್‌ರಾಜ್-ವಾರಣಾಸಿ ಮಾರ್ಗದಲ್ಲಿ ರೈಲ್ವೆ ಹಳಿಯನ್ನು ದ್ವಿಗುಣಗೊಳಿಸಲಾಗಿದೆ. ಫಾಫಮೌ-ಜಂಘೈ ವಿಭಾಗವನ್ನು ದ್ವಿಗುಣಗೊಳಿಸಲಾಗಿದೆ. ಝಾನ್ಸಿ, ಫಾಫಮೌ, ಪ್ರಯಾಗ್ರಾಜ್, ಸುಬೇದರ್‌ಗಂಜ್, ನೈನಿ ಮತ್ತು ಚಿಯೋಕಿ ನಿಲ್ದಾಣಗಳಲ್ಲಿ ಎರಡನೇ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ ಎಂದು ವೈಷ್ಣವ್ ಹೇಳಿದರು.
ಅಂತೆಯೇ ಮೊಬೈಲ್ ಯುಟಿಎಸ್ (ಅನ್ ರಿಸರ್ವ್ಡ್ ಟಿಕೆಟ್ ಸಿಸ್ಟಂ) ಅನ್ನು ಪ್ರಯಾಗರಾಜ್‌ನಲ್ಲಿ ಮೊದಲ ಬಾರಿಗೆ ಬಳಸಲಾಗಿತ್ತು. ಪುರಿಯಲ್ಲಿ ರಥಯಾತ್ರೆಯ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ಬಳಸಲಾಗಿದೆ ಎಂದು ಅವರು ಹೇಳಿದರು.
ಅಂದಹಾಗೆ ಮಹಾ ಕುಂಭ ಮೇಳವು ಜನವರಿ 13 ರಂದು ಪುಷ್ಯ ಪೂರ್ಣಿಮೆಯ ಸಂದರ್ಭದಲ್ಲಿ ಪ್ರಾರಂಭವಾಗಿ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ.