ನವದೆಹಲಿ: 2023-24ರಲ್ಲಿ 1,394 ಔಷಧಗಳು ಪ್ರಮಾಣಿತ ಗುಣಮಟ್ಟ ಪರೀಕ್ಷೆಯಲ್ಲಿ ವೈಫಲ್ಯ ಕಂಡಿವೆ ಎಂದು ಕೇಂದ್ರ ಸರ್ಕಾರವು, ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.
2019-20ರಲ್ಲಿ 950 ಹಾಗೂ 2022-23ರಲ್ಲಿ 1,171 ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿರಲಿಲ್ಲವೆಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ) ವರದಿ ನೀಡಿದೆ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು, ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2023-24ರಲ್ಲಿ (ಏಪ್ರಿಲ್-ಮಾರ್ಚ್) ಒಟ್ಟು 1.06 ಲಕ್ಷ ಔಷಧ ಮಾದರಿಗಳನ್ನು ಪರೀಕ್ಷೆಗೆ ಸ್ವೀಕರಿಸಲಾಗಿತ್ತು. ಈ ಪೈಕಿ 2,988 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ. ಈ ಪೈಕಿ 282 ಮಾದರಿಗಳು ನಕಲಿ ಅಥವಾ ಕಲಬೆರಕೆಯಿಂದ ಕೂಡಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ನಕಲಿ ಹಾಗೂ ಕಲಬೆರಕೆ ಔಷಧ ಮಾದರಿಗಳನ್ನು ತಯಾರಿಸಿದ ಕಂಪನಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಿಡಿಎಸ್‌ಸಿಒ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೇಶೀಯ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಔಷಧಗಳ ತಯಾರಿಕೆಗೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.