ಮೆಕ್ಸಿಕೊ ಸಿಟಿ: ಮಧ್ಯ ಮೆಕ್ಸಿಕೊದಲ್ಲಿ 14 ವರ್ಷದೊಳಗಿನ 13 ಮಕ್ಕಳು ನಿಗೂಢವಾದ ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
ಔಷಧ ನಿರೋಧಕ ಬ್ಯಾಕ್ಟೀರಿಯಾ ಕಾಣಿಸಿಕೊಂಡಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೂ ಸೋಂಕಿನ ನಿಖರವಾದ ಮೂಲವು ಇನ್ನೂ ತನಿಖೆಯಲ್ಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಮೂರು ಸರ್ಕಾರಿ ಆಸ್ಪತ್ರೆಗಳು ಮತ್ತು ಒಂದು ಖಾಸಗಿ ಆಸ್ಪತ್ರೆಯಲ್ಲಿ ಈ ಸೋಂಕು ಮೊದಲ ಬಾರಿಗೆ ಪತ್ತೆಯಾಗಿದೆ. ರಕ್ತದ ಸೋಂಕಿನಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಇಲಾಖೆ ತಿಳಿಸಿದೆ.
20 ಸೋಂಕಿತರ ಪೈಕಿ 15 ಪ್ರಕರಣಗಳನ್ನು ದೃಢಪಡಿಸಲಾಗಿದೆ. ನಾಲ್ಕು ಪ್ರಕರಣಗಳನ್ನು ಶಂಕಿಸಲಾಗಿದ್ದು ಒಂದು ಪ್ರಕರಣವನ್ನು ತಳ್ಳಿಹಾಕಲಾಗಿದೆ. 19 ರೋಗಿಗಳಲ್ಲಿ 13 ಮಕ್ಕಳು ಸಾವನ್ನಪ್ಪಿದ್ದು 6 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಮೆಕ್ಸಿಕೊವನ್ನು ತತ್ತರಿಸುವಂತೆ ಮಾಡಿದೆ. ದೇಶದಲ್ಲಿರುವ ಕಡಿಮೆ ವೆಚ್ಚದ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಇದು ದೊಡ್ಡ ಹೊಡೆತವಾಗಿದೆ. ಕಳೆದ ವಾರ, ದೇಶದ ಪ್ರಮುಖ ರಾಷ್ಟ್ರೀಯ ಹೃದ್ರೋಗ ಸಂಸ್ಥೆಯ ನಿರ್ದೇಶಕರು ಆಸ್ಪತ್ರೆಯಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹಣವಿಲ್ಲ ಎಂದು ಹೇಳಿದ್ದರು.
ನಾವು ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಿದ್ದೇವೆ ಎಂದು ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಭರವಸೆ ನೀಡಿದೆ.