ಪೇಶಾವರ: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಜತೆಗೆ ನಂಟು ಹೊಂದಿದ್ದ ಕನಿಷ್ಠ 13 ಭಯೋತ್ಪಾದಕರನ್ನು ವಾಯವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಬುಧವಾರ ಹತ್ಯೆಗೈದಿವೆ ಎಂದು ಸೇನೆ ತಿಳಿಸಿದೆ.
ಖಚಿತ ಮಾಹಿತಿ ಆಧಾರದ ಮೇಲೆ ಭದ್ರತಾ ಪಡೆಗಳು ದಕ್ಷಿಣ ವಜೀರಿಸ್ತಾನ ಜಿಲ್ಲೆಯ ಸರೋಘದಲ್ಲಿ ಕಾರ್ಯಾಚರಣೆ ನಡೆಸಿದವು.
ಕಾರ್ಯಾಚರಣೆಯ ವೇಳೆ ಭಾರಿ ಗುಂಡಿನ ಚಕಮಕಿ ನಡೆದಿದ್ದು, 13 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿಲಿಟರಿಯ ಮಾಧ್ಯಮ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಶನಿವಾರ ದಕ್ಷಿಣ ವಜೀರಿಸ್ತಾನದ ಮಕೀನ್‌ನಲ್ಲಿನ ಚೆಕ್‌ಪೋಸ್ಟ್ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಗೆ 16 ಮಂದಿ ಯೋಧರು ಹುತಾತ್ಮರಾಗಿದ್ದರು.