ಅಹಮದಾಬಾದ್: ಗುಜರಾತ್‌ನ ಸೂರತ್ ಪೊಲೀಸರು ನಕಲಿ ವೈದ್ಯಕೀಯ ಪದವಿಯ ಜಾಲವನ್ನು ಭೇದಿಸಿದ್ದು, ಜಾಲದ ಮಾಸ್ಟರ್‌ಮೈಂಡ್ ಮತ್ತು ನಕಲಿ ಪದವಿ ಪಡೆದು ಕೆಲಸ ಮಾಡುತ್ತಿದ್ದವರು ಸೇರಿ 13 ಮಂದಿಯನ್ನು ಬಂಧಿಸಲಾಗಿದೆ.
ಈ ನಕಲಿ ವೈದ್ಯರು ₹60,000 ದಿಂದ ₹80,000 ಕೊಟ್ಟು ನಕಲಿ ಪದವಿಯನ್ನು ಖರೀದಿಸಿದ್ದಾರೆ.
ಇವರಲ್ಲಿ ಬಹುತೇಕರು 12ನೇ ತರಗತಿ ಪಾಸ್ ಆಗಿದ್ದಾರಷ್ಟೆ ಎಂಬ ಆತಂಕಕಾರಿ ಮಾಹಿತಿಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ಪ್ರಕರಣದ ಮಾಸ್ಟರ್‌ಮೈಂಡ್ ಅನ್ನು ರಸೇಶ್ ಗುಜರಾತಿ ಎಂದು ಗುರುತಿಸಲಾಗಿದೆ. ಈತ ಸೂರತ್ ನಿವಾಸಿಯಾಗಿದ್ದು, ಸಹ ಆರೋಪಿ ಬಿ.ಕೆ. ರಾವತ್ ಸಹಾಯ ಪಡೆದು ನಕಲಿ ಸರ್ಟಿಫಿಕೇಟ್ ಸೃಷ್ಟಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಕೆಲ ವರ್ಷಗಳಿಂದ 1,500ಕ್ಕೂ ಅಧಿಕ ನಕಲಿ ಸರ್ಟಿಫಿಕೇಟ್‌ಗಳನ್ನು ಅವರು ವಿತರಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ನಗರದ ಪಾಂಡೆಸರಾ ಪ್ರದೇಶದಲ್ಲಿ ಆರೋಪಿಗಳು ನಡೆಸುತ್ತಿದ್ದ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಬ್ಯಾಚುಲರ್ ಆಫ್ ಎಲೆಕ್ಟ್ರೋ ಹೋಮಿಯೋಪತಿ ಮೆಡಿಕಲ್ ಸೈನ್ಸ್ (ಬಿಇಎಂಎಸ್) ಪ್ರಮಾಣಪತ್ರಗಳ ನಕಲಿ ಪದವಿಗಳ ಆಧಾರದ ಮೇಲೆ ಅವರು ಅಭ್ಯಾಸ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳು ಯಾವುದೇ ಪದವಿ ಅಥವಾ ಯಾವುದೇ ರೀತಿಯ ತರಬೇತಿ ಇಲ್ಲದೆ ಅಲೋಪತಿ ಔಷಧ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಂತಹ ನೂರಾರು ನಕಲಿ ವೈದ್ಯರು ರಾಜ್ಯದಾದ್ಯಂತ ಕ್ಲಿನಿಕ್ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಪಾಂಡೆಸರದಲ್ಲಿರುವ ಮೂರು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವಲಯ-4ರ ಉಪ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಗುಜರಾತ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರೋಪಿ ನಕಲಿ ವೈದ್ಯರು ತಮ್ಮ ಬಿಇಎಂಎಸ್ ಪ್ರಮಾಣಪತ್ರಗಳನ್ನು ತೋರಿಸಿದ್ದು, ಅವು ಗುಜರಾತ್ ಸರ್ಕಾರದಿಂದ ಮಾನ್ಯವಾಗಿಲ್ಲ. ಈ ಪದವಿಗಳು ನಕಲಿ ಎಂಬುದನ್ನು ರಾಜ್ಯ ಆರೋಗ್ಯ ಇಲಾಖೆಯೂ ದೃಢಪಡಿಸಿದೆ ಎಂದಿದ್ದಾರೆ.
ಹಣ ಪಡೆದು, ಕೇವಲ 10-15 ದಿನಗಳಲ್ಲಿ ಸರ್ಟಿಫಿಕೇಟ್ ನೀಡಲಾಗಿದೆ ಎಂದು ಸಿಂಗ್ ಹೇಳಿದ್ದಾರೆ. ದಂಧೆಯ ಮಾಸ್ಟರ್ ಮೈಂಡ್ ಗುಜರಾತಿ. ಎಲೆಕ್ಟ್ರೋ ಹೋಮಿಯೋಪಥಿಕ್ ಮೆಡಿಸಿನ್ ಮಂಡಳಿಯಿಂದ ಅಭ್ಯಾಸ ಮಾಡಲು ಅವರಿಗೆ ಅಧಿಕಾರವಿದೆ ಎಂದು ಪ್ರಮಾಣಪತ್ರವನ್ನು ಮುದ್ರಿಸಿ ಅವರಿಗೆ ಹಸ್ತಾಂತರಿಸುತ್ತಿದ್ದರು ಎಂದೂ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಾಸ್ಟರ್‌ಮೈಂಡ್, ರಾವತ್ ಮತ್ತು ಇತರರು ಕ್ಲಿನಿಕ್ ನಡೆಸುತ್ತಿರುವ ಈ ನಕಲಿ ವೈದ್ಯರಿಂದ ವಾರ್ಷಿಕವಾಗಿ ₹5,000 ರಿಂದ ₹15,000 ಸರ್ಟಿಫಿಕೇಟ್ ನವೀಕರಣ ಶುಲ್ಕವಾಗಿ ಸಂಗ್ರಹಿಸುತ್ತಿದ್ದರು.