ಜ್ಯೆಪುರ: ರಾಜಸ್ಥಾನದಲ್ಲಿ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್‌ವೊಂದು ಶುಕ್ರವಾರ ಹಲವು ವಾಹನಗಳಿಗೆ ಗುದ್ದಿದ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು, ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 30 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಗಾಯಗೊಂಡವರ ಪೈಕಿ ಅರ್ಧದಷ್ಟು ಜನರ ಸ್ಥಿತಿ ಚಿಂತಜನಕವಾಗಿದೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿನ್ವ್ಸರ್ ಕಳವಳ ವ್ಯಕ್ತಪಡಿಸಿದ್ದಾರೆ.
ಜೈಪುರ -ಅಜ್ಮೇರ್ ಹೆದ್ದಾರಿಯಲ್ಲಿ ಶಾಲೆಯೊಂದರ ಮುಂದೆ ಅವಘಡ ಸಂಭವಿಸಿದೆ. 30ಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿವೆ.
ಅಪಘಾತದಲ್ಲಿ ಟ್ಯಾಂಕರ್‌ನ ಪೈಪ್‌ಗೆ ಹಾನಿಯಾದ ಕಾರಣ ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಟ್ಯಾಂಕರ್ ಹಿಂದೆ ನಿಂತಿದ್ದ, ಎದುರಿನಿಂದ ಬರುತ್ತಿದ್ದ ಮತ್ತು ಅಪಘಾತಗೊಂಡ ವಾಹನಗಳು ಬೆಂಕಿಗಾಹುತಿಯಾಗಿವೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಹೆಚ್ಚಿನವರು ಇಲ್ಲಿನ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 'ಎಕ್ಸ್' ಮೂಲಕ ತಿಳಿಸಿದ್ದಾರೆ.
ರಾಜಸ್ಥಾನ ಸರ್ಕಾರವು ಮೃತರ ಕುಟುಂಬಕ್ಕೆ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹1 ಲಕ್ಷ ಪರಿಹಾರ ಘೋಷಿಸಿದೆ.