ಜೈಪುರ: ರಾಜಸ್ಥಾನದ ದೌಸಾದಲ್ಲಿ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಐದು ವರ್ಷದ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿ 48 ತಾಸು ಕಳೆದಿದ್ದು, ಆರ್ಯನ್‌ನನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನ ನಡೆಯುತ್ತಿದೆ.
ಮಗುವಿನ ಹತ್ತಿರ ತಲುಪಲು ಕೊಳವೆ ಬಾವಿಗೆ ಸಮಾನಾಂತರವಾಗಿ ಅಗೆಯಲಾಗುತ್ತಿದೆ. ಆದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಅನೇಕ ತೊಡಕುಗಳು ಎದುರಾಗುತ್ತಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರದೇಶದಲ್ಲಿ ನೀರಿನ ಮಟ್ಟ ಸುಮಾರು 160 ಅಡಿ ಆಳದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ನೆಲದಡಿಯಲ್ಲಿ ತೇವದಿಂದಾಗಿ ಮಗುವಿನ ಚಲನವಲನವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು 150 ಅಡಿಗಳವರೆಗೆ ಹೋಗಬಹುದು. ಆದರೆ ಅದಕ್ಕಿಂತಲೂ ಕೆಳಗಡೆ ಹೋಗುವುದು ಸವಾಲಿನಿಂದ ಕೂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೊರೆಯುವ ಯಂತ್ರದ ನೆರವಿನಿಂದ 110 ಅಡಿಯವರೆಗೆ ಅಗೆಯಲಾಗಿದ್ದು, ಉಳಿದ 40 ಅಡಿ ಆಳದವರೆಗೆ ಡ್ರಿಲ್ ಮಾಡುವ ಯೋಜನೆ ಇದೆ ಎಂದು ಅವರು ತಿಳಿಸಿದ್ದಾರೆ.
ಕಾಳಿಖಾಡ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಆರ್ಯನ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದನು. ಒಂದು ತಾಸಿನ ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.