ವಾಷಿಂಗ್ಟನ್: ವಿವಿಧ ಕಾರಣಗಳಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದ 1,500 ಮಂದಿಯ ಶಿಕ್ಷೆ ಕಡಿತಗೊಳಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ. ಅದೇ ರೀತಿ, ಅಹಿಂಸಾತ್ಮಕ ಅಪರಾಧ ಎಸಗಿದ 39 ಮಂದಿಗೆ ಕ್ಷಮಾದಾನ ನೀಡಿದ್ದಾರೆ.
ಅಮೆರಿಕದ ಆಧುನಿಕ ಇತಿಹಾಸದಲ್ಲಿಯೇ ಒಂದೇ ದಿನ ಗರಿಷ್ಠ ಕ್ಷಮಾದಾನ ನೀಡಿದ ಪ್ರಕರಣ ಇದಾಗಿದೆ.
ಕನಿಷ್ಠ ಒಂದು ವರ್ಷಗಳ ಕಾಲ ಗೃಹಬಂಧನ ಶಿಕ್ಷೆ ಪೂರ್ಣಗೊಳಿಸಿದವರನ್ನು ಬಿಡುಗಡೆಗೊಳಿಸಲು ಗುರುವಾರ ಪ್ರಕಟಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿರುವ ಬೈಡನ್, ಮತ್ತಷ್ಟು ಕ್ಷಮಾದಾನ ಅರ್ಜಿಗಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. 2017ರಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಕೆಲವು ದಿನಗಳ ಮುನ್ನ ಬರಾಕ್ ಒಬಾಮಾ ಅವರು ಒಂದೇ ದಿನ 330 ಮಂದಿಗೆ ಕ್ಷಮಾದಾನ ನೀಡಿದ್ದರು.
ಪುತ್ರನಿಗೂ ಕ್ಷಮಾದಾನ: ಅಕ್ರಮವಾಗಿ ಬಂದೂಕು ಇಟ್ಟುಕೊಂಡಿದ್ದ ಹಾಗೂ ತೆರಿಗೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇದೇ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಅವರನ್ನು ದೋಷಿ ಎಂದು ಫೆಡರಲ್ ನ್ಯಾಯಾಲಯ ತೀರ್ಪು ನೀಡಿತ್ತು. ಈ ತಿಂಗಳ ಆರಂಭದಲ್ಲಿ ತನ್ನ ಮಗನಿಗೂ ಬೈಡನ್ ಕ್ಷಮಾದಾನ ನೀಡಿದ್ದರು.