ಕೈರೊ: ಗಾಜಾ ಮೇಲೆ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 15 ಮಂದಿ ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ.
ಇಸ್ರೇಲ್ ಪಡೆಗಳು ಜನವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿಗಳನ್ನು ನಡೆಸಿವೆ. ಗಾಜಾದ ಉತ್ತರ ಭಾಗದ ಅಂಚಿನಲ್ಲಿರುವ ಮನೆಗಳನ್ನು ಸ್ಫೋಟಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಸೇನೆಯ ವೈಮಾನಿಕ ದಾಳಿಯಿಂದ ನುಸಿರಾತ್‌ನ ಕೇಂದ್ರ ಗಾಜಾ ಶಿಬಿರದ ಮನೆಯೊಂದರಲ್ಲಿ ಆರು ಜನರು ಮತ್ತು ಗಾಜಾ ನಗರದ ಮನೆಯೊಂದರಲ್ಲಿ ಮೂವರು ಹತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಗಾಜಾ ಪಟ್ಟಿಯ ಖಾನ್ ಯೂನಿಸ್ ನಗರದಲ್ಲಿನ ಟೆಂಟ್ ಶಿಬಿರಕ್ಕೆ ಕ್ಷಿಪಣಿ ಅಪ್ಪಳಿಸಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಈಜಿಪ್ಟ್ ಗಡಿ ಸಮೀಪವಿರುವ ರಫಾ ನಗರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಇತರ ನಾಲ್ವರು ಹತರಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜಬಾಲಿಯಾ, ಬೆತ್ ಲಾಹಿಯಾ ಮತ್ತು ಬೆತ್ ಹನೌನ್‌ನ ಉತ್ತರ ಗಾಜಾ ಪ್ರದೇಶಗಳಲ್ಲಿ ಕಳೆದ ಅಕ್ಟೋಬರ್‌ನಿಂದ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಪಡೆಗಳು ಮನೆಗಳನ್ನು ಸ್ಫೋಟಿಸಿವೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಹಮಾಸ್ ಯುದ್ಧ ಕೊನೆಗೊಳಿಸುವ ಒಪ್ಪಂದವನ್ನು ಬಯಸುತ್ತಿದೆ. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಿದಾಗ ಮಾತ್ರ ಯುದ್ಧವು ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.