ಕಾಸರಗೋಡು: ನಗರದ ಪ್ರಸಿದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿಸಂಬರ್ 16 ರಿಂದ 19 ರ ತನಕ ಕೋಟಿ ಪಂಚಾಕ್ಷರಿ ಜಪಯಜ್ಞ ಜರಗಲಿದ್ದು, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಶುಭಾಶೀರ್ವಾದ ಹಾಗೂ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದಾಗಿ ಕ್ಷೇತ್ರದ ಟ್ರಸ್ಟ್ ಬೊರ್ಡ್ ಅಧ್ಯಕ್ಷ ವಕೀಲ ಗೋವಿಂದನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ. 16ರಂದು ಬೆಳಗ್ಗೆ 7ಕ್ಕೆ ಜಪಯಜ್ಞಕುಂಡಕ್ಕೆ ಎಡನೀರು ಶ್ರೀಗಳಿಂದ ಪ್ರಥಮ ಸಮಿಧೆ ಸಮರ್ಪಣೆಯೊಂದಿಗೆ ಕೋಟಿ ಪಂಚಾಕ್ಷರಿ ಜಪಯಜ್ಞ ಆರಂಭಗೊಳ್ಳುವುದು. ಸಂಜೆ 5ಕ್ಕೆ ನಡೆಯುವ ಧಾರ್ಮಿಖ ಸಭೆಯಲ್ಲಿ ಎಡನೀರುಶ್ರೀಗಳು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಆಸ್ರ, ಕರ್ನಾಟಕ ಸರ್ಕಾರದ ಮಾನವಹಕ್ಕು ಆಯೋಗ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಮೊದಲಾದವರು ಪಾಲ್ಗೊಳ್ಳುವರು. ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸುವರು.
ಪ್ರತಿದಿನ ಬೆಳಗ್ಗೆ 7, 9 ಹಾಗೂ 11ಗಂಟೆಗೆ ಮೂರು ಹಂತಗಳಲ್ಲಿ ತಲಾ ಒಂದು ಸಾವಿರ ಮಂದಿ ಸಮಿಧೆ ಯಜ್ಞಕ್ಕೆ ಸಮರ್ಪಣೆ ಮಾಡಲಿದ್ದಾರೆ. ಪ್ರತಿಯೊಬ್ಬ ತಲಾ ಒಂದು ಸಾವಿರ ಸಮಿಧೆ ಸಮರ್ಪಿಸಲಿದ್ದು, ದಿನವೊಂದಕ್ಕೆ 30ಲಕ್ಷದಂತೆ ಮೂರು ದಿವಸಗಳ ಕಾಲ 90ಲಕ್ಷ ಹಾಗೂ ಕೊನೇ ದಿನದಂದು 10ಲಕ್ಷ ಸೇರಿ ಒಟ್ಟು ಒಂದು ಕೋಟಿ ಪಂಚಾಕ್ಷರಿ ಜಪಯಜ್ಞ ಸಲ್ಲಿಸಲಾಗುವುದು. ನಾಲ್ಕು ದಿನಗಳಲ್ಲಾಗಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ.
18ರಂದು ಸಂಜೆ ಶ್ರೀಚಕ್ರ ಪೂಜೆ ನೆರವೇರಲಿದೆ. 19ರಂದು ಬೆಳಗ್ಗೆ ಶ್ರೀರುದ್ರಹೋಮ ಆರಂಭಗೊಳ್ಳಲಿದ್ದು, ಅಪರಾಹ್ನ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ರುದ್ರಹೋಮ ಪೂರ್ಣಾಹುತಿ ನಡೆಯುವುದು. ವಿವಿಧ ದಿನಗಳಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಕೋಟಿಪಂಚಾಕ್ಷರಿ ಜಪ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ಹೋಟೆಲ್ ಉದ್ಯಮಿ ರಾಮ್ ಪ್ರಸಾದ್, ಉಪಾಧ್ಯಕ್ಷ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಉಮೇಶ್ ಅಣಂಗೂರು, ಕಿಶೋರ್ ಕುಮಾರ್, ಗಂಗಾಧರ್‍ಕುವೆತ್ತೊಟ್ಟಿ ಉಪಸ್ಥಿತರಿದ್ದರು.