ಚಂಡೀಗಢ: ಪಂಜಾಬ್‌ನ ರೈತ ಮುಖಂಡ ಜಗಜಿತ್ ಸಿಂಗ್ ಡಲ್ಲೇವಾಲ್ ಅವರು ಖನೌರಿ ಗಡಿಯಲ್ಲಿ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಬುಧವಾರ 16 ದಿನ ಪೂರೈಸಿತು.
ಡಲ್ಲೇವಾಲ್ ತೂಕದಲ್ಲಿ 11 ಕೆ.ಜಿ.ಯಷ್ಟು ಕಡಿಮೆಯಾಗಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವು ಏರಿಳಿತಗೊಳ್ಳುತ್ತಿದೆ. ವೈದ್ಯರ ತಂಡ ನಿಗಾವಹಿಸಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಆಮರಣಾಂತ ಉಪವಾಸ ನಡೆಸುತ್ತಿರುವ ಡಲ್ಲೇವಾಲ್ ಸುತ್ತಲೂ ರೈತರು ಭದ್ರಕೋಟೆಯನ್ನು ನಿರ್ಮಿಸಿದ್ದಾರೆ.
ಪಂಜಾಬ್- ಹರಿಯಾಣ ನಡುವಿನ ಶಂಭು ಹಾಗೂ ಖನೌರಿ ಗಡಿಯಲ್ಲಿ ನಡೆದಿರುವ ಹೋರಾಟದ ಯಶಸ್ಸಿಗಾಗಿ ಮತ್ತು ಡಲ್ಲೇವಾಲ್ ಅವರ ಆರೋಗ್ಯದ ಚೇತರಿಕೆಗಾಗಿ ರೈತರು ಬುಧವಾರ ಪ್ರಾರ್ಥಿಸಿದರು.
ರೈತರು ಬೆಳೆದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿ ಸೇರಿದಂತೆ ಕೃಷಿಕರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿಕ್ಕಾಗಿ, ಪಂಜಾಬ್‌ನ ರೈತ ಮುಖಂಡರಾದ ಜಗಜಿತ್ ಸಿಂಗ್ ಡಲ್ಲೇವಾಲ್ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ದೆಹಲಿ ಚಲೋಗೆ ಭದ್ರತಾ ಸಿಬ್ಬಂದಿಯು ತಡೆಯೊಡ್ಡಿರುವುದರಿಂದ ಕಳೆದ ಫೆ. 13ರಿಂದಲೂ ರೈತರು, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬ್ಯಾನರ್‌ನಡಿ ಶಂಭು ಹಾಗೂ ಖನೌರಿ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್‌ನ ರೈತರ ಬಗ್ಗೆ ಕಳಕಳಿಯಿದೆ. ಆದ್ದರಿಂದಲೇ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದಾರೆ. ನಿಮಗೆ ಕೈಮುಗಿದು ಬೇಡಿಕೊಳ್ಳುವೆ, ಮಾತುಕತೆಗೆ ಬನ್ನಿ' ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಪಟಿಯಾಲದಲ್ಲಿ ಪುನರುಚ್ಚರಿಸಿದರು.