ನವದೆಹಲಿ: ರಾಜ್ಯಸಭೆ ಸಭಾಪತಿ ಜಗದೀಪ್ ಧಂಖರ್ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದದ ನಂತರ ರಾಜ್ಯಸಭೆ ಕಲಾಪವನ್ನು ಡಿಸೆಂಬರ್ 16 ಕ್ಕೆ ಮುಂದೂಡಲಾಯಿತು.
ಇಂದು ಬೆಳಗ್ಗೆ ಸದನ ಕಲಾಪಕ್ಕೆ ಸೇರುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಪ್ರಸ್ತಾವನೆಯ ಮೇಲೆ ಚರ್ಚೆಗೆ ಒತ್ತಾಯಿಸುತ್ತಿದ್ದಂತೆ ಕೋಲಾಹಲ ಉಂಟಾಯಿತು, ಆಡಳಿತ ಪಕ್ಷ ಸದಸ್ಯರು ಆಕ್ಷೇಪ ಎತ್ತಿದರು. ಈ ವೇಳೆ ತೀವ್ರ ಗದ್ದಲ, ಕೋಲಾಹಲ ಉಂಟಾಗಿ ಕಲಾಪ ಮುಂದೂಡಿಕೆಗೆ ಕಾರಣವಾಯಿತು.
'ಅತ್ಯಂತ ಪಕ್ಷಪಾತಿ' ಎಂದು ಆರೋಪಿಸಿ ರಾಜ್ಯಸಭಾಧ್ಯಕ್ಷ ಜಗದೀಪ್ ಧಂಖರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಅವಿಶ್ವಾಸ ನಿರ್ಣಯದ ನೋಟಿಸ್ ನ್ನು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಮಂಡಿಸಿದವು.
ಗದ್ದಲದ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಧನಕರ್ ಅವಕಾಶ ನೀಡಿದರು. ಆಡಳಿತ ಪಕ್ಷದ ಸದಸ್ಯರಿಗೆ ಮಾತನಾಡಲು ಹೆಚ್ಚಿನ ಸಮಯಾವಕಾಶ ನೀಡುವ ಮೂಲಕ ಸಭಾಪತಿಗಳು ಒಲವು ತೋರುತ್ತಿದ್ದಾರೆ, ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಧಂಖರ್ ಅವರು ಖರ್ಗೆ ಮತ್ತು ಸಭಾನಾಯಕ ಜೆಪಿ ನಡ್ಡಾ ಅವರನ್ನು ಅಧ್ಯಕ್ಷರ ಚೇಂಬರ್‌ನಲ್ಲಿ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನದಲ್ಲಿ ತಮ್ಮನ್ನು ಭೇಟಿಯಾಗುವಂತೆ ಆಹ್ವಾನಿಸಿ ಕಲಾಪವನ್ನು ಡಿಸೆಂಬರ್ 16 ಕ್ಕೆ ಮುಂದೂಡಿದರು.