ಕಾಸರಗೋಡು: ಪೊಲೀಸ್ ಮಾರುವೇಷದೊಂದಿಗೆ ಕಾರು ತಡೆದು ವ್ಯಾಪಾರಿಯ 1.75ಲಕ್ಷ ರಊ. ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿಯನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಡೋಂಬೇಳೂರು ಏಳನೇಮೈಲು ನಿವಾಸಿ ಕೆ. ನೌಶೀಫ್, ಕಾಯಲಡ್ಕ ನಿವಾಸಿ ರಂಶೀದ್ ಹಾಗೂ ಹೊಸದುರ್ಗ ಮಿನಾಪೀಸ್ ಸನಿಹದ ನಿವಾಸಿ ಕೆ. ಮಹಮ್ಮದ್ ಸಿನಾನ್ ಬಂಧಿತರು. ಹೊಸದುರ್ಗ ನಾರ್ತ್ ಕೋಟಚ್ಚೇರಿಯ ವ್ಯಾಪಾರಿ ಬಿ. ಶಂಸುಸಲಾಮ್ ಅವರು ನ. 16ರಂದು ಪಳ್ಳಿಕೆರೆ ಕಲ್ಲಿಂಗಾಲ್‍ನ ತಮ್ಮ ಮನೆಯಿಂದ ಕೋಟಚ್ಚೇರಿಗೆ ತೆರಳುತ್ತಿದ್ದ ಸಂದರ್ಭ ಪಳ್ಳಿಕೆರೆ ಚೇಟುಕುಂಡು ಬಳಿ ನೌಶೀಫ್ ಪೊಲೀಸ್ ವೇಷದಲ್ಲಿ ನಿಂತು ಕಾರಿಗೆ ತಡೆಯೊಡ್ಡಿದ್ದಾನೆ. ನಂತರ ಸ್ನೇಹಿತರ ಸಹಾಯದಿಂದ ಅವರನ್ನು ಹಿಂದಿನ ಸೀಟಲ್ಲಿ ಬಲವಂತವಾಗಿ ಕುಳ್ಳಿರಿಸಿ ಕಾರಿನ ಡ್ಯಾಶ್‍ಬೋರ್ಡ್‍ನಲ್ಲಿದ್ದ 1.75ಲಕ್ಷ ರೂ. ಎಗರಿಸಿರುವುದಾಗಿ ಶಂಸುಸಲಾಮ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಮಡದಲ್ಲಿ ಒಟ್ಟು ಏಳು ಮಂದಿಯಿದ್ದು, ಇತರ ನಾಲ್ಕು ಮಂದಿ ತಲೆಮರೆಸಿಕೊಂಡಿದ್ದಾರೆ.