ಸಿಯೊಲ್ : ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಭಾನುವಾರ) ಬೆಳಿಗ್ಗೆ ಇಳಿಯುತ್ತಿದ್ದ 'ಜೆಜು ಏರ್' ವಿಮಾನ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ 179 ಮಂದಿ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ 'ಯೊನ್ಹಾಪ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲ್ಯಾಂಡ್ ಆಗುವ ವೇಳೆ ರನ್‌ವೇನಿಂದ ಜಾರಿದ ವಿಮಾನ, ವೇಗವಾಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಕ್ಷಣವೇ ಹೊತ್ತಿ ಉರಿದಿದೆ. ಬ್ಯಾಂಕಾಕ್‌ನಿಂದ ಬಂದ ಈ ವಿಮಾನದಲ್ಲಿ 175 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿ ಸೇರಿ ಒಟ್ಟು 181 ಜನರಿದ್ದರು.
ರಾಷ್ಟ್ರೀಯ ಶೋಕಾಚರಣೆ ಘೋಷಣೆ
ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ ದ.ಕೊರಿಯಾ ಸರ್ಕಾರ ಡಿಸೆಂಬರ್ 29ರಿಂದ ಜನವರಿ 4ರ ವರೆಗೆ 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಇಂದು ಸಂಜೆ ನಡೆದ ತುರ್ತು ಸಭೆಯಲ್ಲಿ ದಕ್ಷಿಣ ಕೊರಿಯಾದ ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೊಕ್, ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.