ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕಾರ್ಮಿಕ ಸಘಟನೆ ಎಐಟಿಯುಸಿ ವತಿಯಿಂದ ಜ.17ರಂದು ಒಂದು ಲಕ್ಷ ಕಾರ್ಯಕರ್ತರನ್ನೊಳಗೊಂಡ ಬೃಹತ್ ಪ್ರತಿಭಟನೆ ತಿರುವನಂತಪುರ ಸೆಕ್ರೆಟರಿಯೇಟ್ ಎದುರು ನಡೆಯಲಿದೆ. ಇದರ ಅಂಗವಾಗಿ ಸಂಘಟನೆ ರಾಜ್ಯಾಧ್ಯಕ್ಷ ಟಿ.ಜೆ.ಆಂಜೆಲೋಸ್ ನೇತೃತ್ವ ನೀಡುವ ಪ್ರಚಾರ ಜಾಥಾ ಕಾಸರಗೋಡಿನಿಂದ ತ್ರಿಶೂರಿನವರೆಗೆ, ಪ್ರಧಾನ ಕಾರ್ಯದರ್ಶಿ ಕೆ.ಪಿ.ರಾಜೇಂದ್ರನ್ ನೇತೃತ್ವದ ಜಾಥಾ ಎರ್ನಾಕುಳಂನಿಂದ ತಿರುವನಂತಪುರ ವರೆಗೆ ನಡೆಯಲಿರುವುದಾಗಿ ಎಐಟಿಯುಸಿ ರಾಜ್ಯಾಧ್ಯಕ್ಷ ಟಿ.ಜೆ.ಆಂಜೆಲೋಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ವಲಯದ ಸಂಸ್ಥೆಗಳ ಮಾರಾಟ ನಿಲ್ಲಿಸಬೇಕು ಮತ್ತು ಅದಾನಿ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ನೇಮಿಸಬೇಕು, ಕಾಯಂ ಉದ್ಯೋಗ ತೊಡೆದುಹಾಕಿ ಗುತ್ತಿಗೆ ಆಧಾರದ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಕೇಂದ್ರ ಸರ್ಕಾರ ತನ್ನ ಧೋರಣೆ ಕೈಬಿಡಬೇಕು, ದಿಲ್ಲಿಯಲ್ಲಿ ರೈತರೊಂದಿಗೆ ಮಾಡಿಕೊಂಡಿದ್ದ ಹಿಂದಿನ ಒಪ್ಪಂದಗಳ ಶೀಘ್ರ ಅನುಷ್ಠಾನಗೊಳಿಸಬೇಕು, ಕೇರಳದಲ್ಲಿ ಕೈಗಾರಿಕೆ ಮತ್ತು ಕೃಷಿ ಉದ್ದೇಶಗಳಿಗಾಗಿ ಮೀಸಲಿರಿಸಿದ ಭೂಮಿಯನ್ನು ಇತರ ಉದ್ದೇಶಗಳಿಗೆ ವರ್ಗಾಯಿಸುವುದನ್ನು ನಿಲ್ಲಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಕೃಷ್ಣನ್, ಜಿಲ್ಲಾಧ್ಯಕ್ಷ ಕೆ.ಎಸ್. ಕುರಿಯಾಕೋಸ್, ಜಿಲ್ಲಾ ಕಾರ್ಯದರ್ಶಿ ಟಿ. ಕೃಷ್ಣನ್, ಸಂಘಟನಾ ಸಮಿತಿ ಸಂಚಾಲಕ ಬಿಜು ಉಣ್ಣಿತ್ತಾನ್ ಉಪಸ್ಥಿತರಿದ್ದರು.