ದ.ಕೊರಿಯ:ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ರನ್‌ವೇನಿಂದ ಪಕ್ಕಕ್ಕೆ ಜಾರಿದ ವಿಮಾನವು ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ 181 ಮಂದಿಯ ಪೈಕಿ 179 ಮಂದಿ ಜೀವ ಕಳೆದು ಕೊಂಡಿದ್ದಾರೆ.
ಅಚ್ಚರಿ ಎಂಬಂತೆ 181 ಮಂದಿಯ ಪೈಕಿ ವಿಮಾನದ ಇಬ್ಬರು ಸಿಬ್ಬಂದಿ ಮಾತ್ರ ಪ್ರಾಣ ಉಳಿಸಿಕೊಂಡಿದ್ದಾರೆ.
ಅದೂ ಕೇವಲ ಸಣ್ಣ, ಪುಟ್ಟ ಗಾಯಗಳಿಂದ ಮಾತ್ರ ಬದುಕುಳಿದಿದ್ದಾರೆ. ಸದ್ಯ ಅವರನ್ನು ಮುವಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
32 ವರ್ಷದ ಲೀ ಮತ್ತು 25 ವರ್ಷದ ವೋನ್ ಎಂಬಿಬ್ಬರು ಬದುಕುಳಿದವರು. ಇವರು ವಿಮಾನ ಲ್ಯಾಂಡಿಂಗ್ ವೇಳೆ ಪ್ರಯಾಣಿಕರು ಇಳಿಯುವುದಕ್ಕೆ ಸಹಾಯ ಮಾಡಲು ನಿಯೋಜನೆ ಆಗಿದ್ದರು. ಲ್ಯಾಂಡಿಂಗ್ ವೇಳೆ ವಿಮಾನದ ಹಿಂಬಾಗದಲ್ಲಿದ್ದರು ಎಂದು ಕೊರಿಯನ್ ಟೈಮ್ಸ್ ವರದಿ ಮಾಡಿದೆ.
ವಿಮಾನ ಗೋಡೆಗೆ ಡಿಕ್ಕಿ ಹೊಡೆದ ನಂತರ ಸಣ್ಣ ಪುಟ್ಟ ಗಾಯಗಳಿಂದ ಲೀ ಹಾಗೂ ವೋನ್ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ.
ಜೆಜು ಏರ್ ವಿಮಾನಯಾನ ಕಂಪನಿಗೆ ಸೇರಿದ್ದ ವಿಮಾನ ಇದಾಗಿತ್ತು. ವಿಮಾನವು ರನ್‌ವೇ ಮೇಲೆ ಇಳಿಯುವ ಸಂದರ್ಭದಲ್ಲಿ ಅದರ ಮುಂದಿನ ಚಕ್ರವು ಸರಿಯಾಗಿ ತೆರೆದುಕೊಂಡಿರಲಿಲ್ಲ ಎನ್ನಲಾಗಿದೆ. ಈ ದುರಂತವು ದಕ್ಷಿಣ ಕೊರಿಯಾದಲ್ಲಿ ನಡೆದ ಅತಿದೊಡ್ಡ ವಿಮಾನ ದುರಂತವಾಗಿದೆ.