ಪೆರ್ಲ : ಭೀಕರ ಅಗ್ನಿ ಅನಾಹುತಕ್ಕೆ ತುತ್ತಾದ ಪೆರ್ಲ ಪೇಟೆಯಲ್ಲಿ ನೀರವ ಮೌನ ಆವರಿಸಿದ್ದು, ದುರಂತಕ್ಕೆ ಕಾರಣ ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಮಂಜೇಶ್ವರ ತಹಸೀಲ್ದಾರ್ ಸೇರಿದಂತೆ ಕಂದಾಯ, ವಿದ್ಯುತ್, ಸ್ಥಳೀಯಾಡಳಿತ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸ್ ಹಾಗೂ ವಿದ್ಯುತ್ ಇಲಾಖೆಯ ಫೊರೆನ್ಸಿಕ್ ವಿಭಾಗದ ಅದಿಕಾರಿಗಳೂ ಭೇಟಿ ನೀಡಿ ದುರಂತಕ್ಕೆ ಕಾರಣ ಪತ್ತೆಹಚ್ಚುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಬೆಂಕಿಗಾಹುತಿಯಾದ ಏಳು ವ್ಯಾಪಾರಿ ಸಂಸ್ಥೆಗಳಿಗೆ 1.86ಕೋಟಿ ರೂ. ಮೊತ್ತದ ನಾಶ ನಷ್ಟ ಅಂದಾಜಿಸಲಾಗಿದೆ. ಪತ್ರಿಕಾ ವಿತರಕ, ವ್ಯಾಪಾರಿ ಗೋಪಿನಾಥ ಪೈ ಅವರ ಮಾಲಿಕತ್ವದ ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಅಂಗಡಿಗಳು ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಪ್ರವೀಣ್ ಅಟೋಮೊಬೈಲ್ ಸಂಸ್ಥೆಯೊಂದರಲ್ಲೇ 88ಲಕ್ಷ ರೂ. ಮೌಲ್ಯದ ಸಾಮಗ್ರಿ ಉರಿದು ನಾಶಗೊಂಡಿದೆ. ಕಟ್ಟಡ ಹೊಂದಿದ್ದ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ದೀರ್ಘ ಕಾಲದಿಂದ ವ್ಯಾಜ್ಯ ಮುಂದುವರಿಯುತ್ತಿರುವ ಮಧ್ಯೆ ಏಕಾಏಕಿ ಕಟ್ಟಡ ಬೆಂಕಿಗಾಹುತಿಯಾಗಿರುವುದು ಹಲವು ನಿಗೂಢತೆಗೆ ಕಾರಣವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಶಾರ್ಟ್ ಸಕ್ರ್ಯೂಟ್ ಕಾರಣವೆಂದು ಸಂಶಯಿಸಲಾಗಿದೆ.
ಈ ಮಧ್ಯೆ ಸುಟ್ಟುಕರಕಲಾಗಿರುವ ಸಾಮಗ್ರಿ ತೆರವುಗೊಳಿಸಲು ಪೊಲೀಸ್ ಇಲಾಖೆ ಸಂಬಂಧಪಟ್ಟವರಿಗೆ ಅನುಮತಿ ನೀಡಿದ್ದು, ಅಂಗಡಿ ಮಾಡಲಿಕರು ಶುಚೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.